ನವದೆಹಲಿ: ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಹಾಗೂ ಜೆಟ್ ಇಂಧನದ ರಫ್ತಿಗೆ ವಿಧಿಸಿದ್ದ ಸುಂಕ ಹಾಗೂ 'ಆಕಸ್ಮಿಕ ಲಾಭದ ಮೇಲಿನ ತೆರಿಗೆ'ಯನ್ನು (ವಿಂಡ್‌ಫಾಲ್ ಟ್ಯಾಕ್ಸ್) ಮೂರು ವಾರಗಳ ಬಳಿಕ ದಿಢೀರ್ ಕಡಿತಗೊಳಿಸಿದೆ.
ಕಚ್ಚಾ ತೈಲ ದರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿದಿರುವುದರಿಂದ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
1 ಲೀಟರ್ ಪೆಟ್ರೋಲ್ ರಫ್ತಿನ ಮೇಲೆ ವಿಧಿಸುತ್ತಿದ್ದ ₹6 ಸುಂಕವನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ. ಒಂದು ಲೀಟರ್ ಡೀಸೆಲ್‌ಗೆ ವಿಧಿಸುತ್ತಿದ್ದ ಆಕಸ್ಮಿಕ ಲಾಭದ ಮೇಲಿನ ತೆರಿಗೆಯನ್ನು ₹13 ರಿಂದ ₹11ಕ್ಕೆ ಹಾಗೂ 1 ಲೀಟರ್ ವಿಮಾನ ಇಂಧನಕ್ಕೆ (ಎಟಿಎಫ್) ವಿಧಿಸುತ್ತಿದ್ದ ಆಕಸ್ಮಿಕ ಲಾಭದ ಮೇಲಿನ ತೆರಿಗೆಯನ್ನು ₹6ರಿಂದ ₹4ಕ್ಕೆ ಇಳಿಸಲಾಗಿದೆ.
ದೇಶಿಯವಾಗಿ ಉತ್ಪಾದನೆಯಾಗುವ ಒಂದು ಟನ್ ಕಚ್ಚಾ ತೈಲಕ್ಕೆ ವಿಧಿಸುತ್ತಿದ್ದ ₹23,250 ತೆರಿಗೆಯನ್ನೂ ₹17,000ಕ್ಕೆ ಇಳಿಸಲಾಗಿದೆ
ಸರ್ಕಾರದ ಈ ನಿರ್ಧಾರದಿಂದ ಗ್ಯಾಸೋಲಿನ್ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದ ರಿಲಯನ್ಸ್ ಇಂಡಸ್ಟ್ರೀಜ್, ವೇದಾಂತ್‌ನಂತಹ ಕಂಪನಿಗಳಿಗೆ ಲಾಭ ಆಗಲಿದೆ. ಅಲ್ಲದೇ ಓಎನ್‌ಜಿಸಿಗೂ ಇದರಿಂದ ಲಾಭ ಆಗಲಿದೆ.
ಆಕಸ್ಮಿಕ ಲಾಭದ ಮೇಲಿನ ತೆರಿಗೆಯನ್ನು ಕಡಿತಗೊಳಿಸಿದ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ಷೇರುಗಳು ನೆಗೆತವಾಗಿವೆ.
ಜುಲೈ 1 ರಂದು ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಹಾಗೂ ಜೆಟ್ ಇಂಧನ ರಫ್ತಿನ ಮೇಲೆ ತೆರಿಗೆ ಹಾಗೂ ಆಕಸ್ಮಿಕ ಲಾಭದ ಮೇಲಿನ ತೆರಿಗೆಯನ್ನು ವಿಧಿಸಿತ್ತು. ಈ ನಿರ್ಧಾರ ತೈಲ ಕಂಪನಿಗಳಿಗೆ ಶಾಕ್ ನೀಡಿತ್ತು.
ಈಚಿನ ತಿಂಗಳುಗಳಲ್ಲಿ ಕಚ್ಚಾ ತೈಲದ ಬೆಲೆಯು ತೀವ್ರ ಏರಿಕೆ ಕಂಡಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯ ಬೆಲೆಗೆ ಕಚ್ಚಾ ತೈಲವನ್ನು ಸಂಸ್ಕರಣಾ ಕಂಪನಿಗಳಿಗೆ ಮಾರಾಟ ಮಾಡುವ ದೇಶಿ ಕಚ್ಚಾ ತೈಲ ಉತ್ಪಾದನಾ ಕಂಪನಿಗಳು ಇದರಿಂದಾಗಿ ಲಾಭ ಪಡೆದುಕೊಂಡಿವೆ. ಅವು ಆಕಸ್ಮಿಕವಾಗಿ ಭಾರಿ ಪ್ರಮಾಣದ ಲಾಭ ಮಾಡಿಕೊಳ್ಳುತ್ತಿವೆ. ಇದನ್ನು ಪರಿಗಣಿಸಿ ಸೆಸ್ ವಿಧಿಸಲಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿತ್ತು.
'ತೈಲ ಸಂಸ್ಕರಣಾ ಕಂಪನಿಗಳು ಅಂತರರಾಷ್ಟ್ರೀಯ ಬೆಲೆಗೆ ಅನುಗುಣವಾಗಿ ಪೆಟ್ರೋಲ್, ಡೀಸೆಲ್ ರಫ್ತು ಮಾಡುತ್ತಿವೆ. ರಫ್ತು ಬಹಳ ಆದಾಯ ತಂದುಕೊಡುತ್ತಿದೆ. ಆದರೆ, ಕೆಲವು ಕಂಪನಿಗಳು ದೇಶದಲ್ಲಿನ ತಮ್ಮ ಪೆಟ್ರೋಲ್ ಬಂಕ್‌ಗಳನ್ನು ಭರ್ತಿ ಮಾಡುತ್ತಿಲ್ಲದಿರುವುದು ಕಂಡುಬಂದಿದೆ. ಹೀಗಾಗಿ, ಪೆಟ್ರೋಲ್, ಡೀಸೆಲ್ ಮತ್ತು ಎಟಿಎಫ್ ರಫ್ತಿಗೆ ತೆರಿಗೆ ವಿಧಿಸಲಾಗಿದೆ' ಎಂದು ಸಚಿವಾಲಯ ಜುಲೈ 1 ರಂದು ತಿಳಿಸಿತ್ತು.