ಮೈಕಪ್ಪಿನ ಕೀಳರಿಮೆಯನ್ನು ಮೇಕಪ್ಪಿನ ಬಲದಿಂದ ಮೆಟ್ಟಿ ನಿಲ್ಲುವ ಮನೋಭಾವವನ್ನೇ ಅಲುಗಾಡಿಸಿದ ಪ್ರಶ್ನೆ ಇದಾಗಿದೆ
ಗಡಿಯಾರ ಬಿಟ್ಟು ಬೇರೇನೂ ಆಭರಣ ಧರಿಸದ, ಮುಖಕ್ಕೆ ಕನಿಷ್ಠ ಪೌಡರ್ ಅನ್ನೂ ಹಾಕಿಕೊಳ್ಳದ ಕೇರಳದ ಮಲಪ್ಪುರಂ ಜಿಲ್ಲೆಯ ಜಿಲ್ಲಾಧಿಕಾರಿಣಿ ರಾಣಿ ಸೋಯಾಮೋಯಿ ಅವರು ಯಾಕೆ ತಾವು ಮೇಕಪ್ ಹಾಕಿಕೊಳ್ಳುವುದಿಲ್ಲ ಎಂದು ವಿವರಿಸಿದ ಸಂದರ್ಶನದ ತುಣುಕೊಂದು ಇತ್ತೀಚೆಗೆ ವೈರಲ್ ಆಗಿತ್ತು.
ಜಾರ್ಖಂಡ್ ರಾಜ್ಯದ ಕೋಡರ್ಮಾ ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿನ 'ಮೈಕಾ' ಗಣಿನಿಬಿಡ ಪ್ರದೇಶದ ಗುಡಿಸಲೊಂದರಲ್ಲಿ ಹುಟ್ಟಿದ ಅವರಿಗೆ ತಂದೆ, ತಾಯಿ, ಇಬ್ಬರು ಅಣ್ಣಂದಿರು ಮತ್ತು ಒಬ್ಬ ತಂಗಿಯಿದ್ದರು. ಅಲ್ಲಿ ಶಾಲೆ, ಆಸ್ಪತ್ರೆ, ಶೌಚಾಲಯ, ಕರೆಂಟ್ ಮುಂತಾದ ಯಾವ ಸೌಲಭ್ಯಗಳೂ ಇರಲಿಲ್ಲ. ಹೆಂಗಸರು ಮೈಕಾ ಗಣಿಗಳಲ್ಲಿ ರಾಶಿಯಾಗಿ ಬಿದ್ದಿರುವ ಮಣ್ಣಿನ ಗುಡ್ಡೆಯನ್ನು ಬರಿಗೈಯಿಂದ ಬೆದಕಿ, ಬೆದಕಿ ಮೈಕಾದ ಅದಿರನ್ನು ತೆಗೆದರೆ; ಗಂಡಸರು ಇಕ್ಕಟ್ಟಾದ ಸುರಂಗಗಳೊಳಗೆ ಹೋಗಿ ಹಾರೆ-ಸುತ್ತಿಗೆಯಿಂದ ಗೋಡೆ ಒಡೆದು ಅದಿರು ತರುತ್ತಿದ್ದರು. ತೀವ್ರ ಅನಾರೋಗ್ಯ ಮತ್ತು ಹಸಿವಿನಿಂದ ಸೋದರರು ತೀರಿಕೊಂಡ ಮೇಲೆ ಆರು ವರ್ಷದ ರಾಣಿ ಮತ್ತವರ ತಂಗಿ ಕೂಡ ಅನಿವಾರ್ಯವಾಗಿ ಆಳ ಸುರಂಗದ ಕೊರಕಲುಗಳಲ್ಲಿ ವಿಷಪೂರಿತ ದೂಳು ಕುಡಿಯುತ್ತ ಅದಿರು ಸಂಗ್ರಹಿಸಲು ಹೊರಡಬೇಕಾಯಿತು.
ಹೀಗೊಮ್ಮೆ ವಿಪರೀತ ಜ್ವರದ ಕಾರಣವಾಗಿ ರಾಣಿಯವರು ಗಣಿಗೆ ಹೋಗದ ದಿನ, ಗಣಿ ಕುಸಿತದಿಂದಾಗಿ ಅಪ್ಪ, ಅಮ್ಮ, ತಂಗಿ ಮೂವರೂ ಜೀವಂತ ಸಮಾಧಿಯಾದರು. ಅಂಥಾ ರಾಣಿ ಅವರು ಸರ್ಕಾರಿ ಅನಾಥಾಶ್ರಮಕ್ಕೆ ಸೇರಿ, ಓದಿಕೊಂಡು
ಈಗ ಜಿಲ್ಲಾಧಿಕಾರಿಯಾಗಿದ್ದಾರೆ. 'ಸುರಂಗಗಳಲ್ಲಿ ಸಿಲುಕಿದ ಶಿಶು ಕನಸುಗಳು ಮತ್ತು ಛಿದ್ರವಾದ ಬಡವರ ಬದುಕುಗಳು- ನಮ್ಮ ಕೆನ್ನೆಗೆ, ಚರ್ಮಕ್ಕೆ ಬಣ್ಣ ತುಂಬುತ್ತಿವೆ ಎಂದು ನನಗರಿವಾದ ದಿನವೇ ನಾನು ಈ ಪ್ರಸಾಧನಗಳಿಂದ ದೂರ ಸರಿದೆ' ಎನ್ನುವ ರಾಣಿ ಸೋಯಾಮೋಯಿ ಅವರು ಎತ್ತಿರುವ ಪ್ರಶ್ನೆ ಬದುಕಿನದ್ದಕ್ಕಿಂತ ಮುಖ್ಯವಾಗಿ ಬಣ್ಣದ್ದು ಅಂತ ನನಗೆ ತೀವ್ರವಾಗಿ ಅನಿಸಿತು.
ಆಮೇಲೆ ಫ್ಯಾಕ್ಟ್ ಚೆಕ್ ಮಾಡಿದಾಗ ತಿಳಿದ ವಿಷಯವೆಂದರೆ ಅಸಲಿಗೆ ಮಲಪ್ಪುರಂ ಜಿಲ್ಲೆಯಲ್ಲಿ ರಾಣಿ ಸೋಯಾಮೋಯಿ ಎಂಬ ಜಿಲ್ಲಾಧಿಕಾರಿಣಿಯೇ ಆಗಿಹೋಗಿಲ್ಲ ಎಂಬುದು. ಇಲ್ಲಿಯೇ ಇರೋದು ಮಜಾ. ವಾಸ್ತವದಲ್ಲಿ ಈ ವಿಡಿಯೊದಲ್ಲಿದ್ದದ್ದು ಶೈನಾಮೋಳ್ ಎಂಬ ಜಿಲ್ಲಾಧಿಕಾರಿಣಿ. ಇನ್ನು ರಾಣಿ ಸೋಯಾಮೋಯಿ ಎಂಬುದು ಮಲಯಾಳಂ ಕಥೆಗಾರ ಹಕೀಮ್ ಮೊರಯೂರ್ ಅವರ `ಮೂರು ಪೆಣ್ಣುಗಳ್' ಎಂಬ ಕಥಾಸಂಕಲನದಲ್ಲಿರುವ 'ಶೈನಿಂಗ್ ಫೇಸಸ್' ಎಂಬ ಕಥೆಯಲ್ಲಿರುವ ಒಂದು ಕಲ್ಪಿತ ಪಾತ್ರ. ಹೀಗೆ ಕಲ್ಪಿತ ಪಾತ್ರವೊಂದು ನಿಜಜೀವನದ ವ್ಯಕ್ತಿಯಾಗಿ ಬಿಂಬಿತವಾಗುವುದರ ಹಿಂದೆ ಇರುವುದು ಮಾತ್ರ ತನ್ನ ಮೈಕಪ್ಪಿನ ಕೀಳರಿಮೆಯನ್ನು ಸಾಧನೆಯ ಬಲದಿಂದ ಮೆಟ್ಟಿ ನಿಲ್ಲಬೇಕೆಂಬ ತಹತಹಿಕೆಯ ಲಕ್ಷಾಂತರ ಜನರಿಂದ ರೂಪಿತವಾದ ಒಂದು ಸಾಮಾಜಿಕ ನಿರೀಕ್ಷೆಯೇ ಹೊರತು ಬೇರೇನಲ್ಲ.
ಈಗ ಈ ನಿಜವಾದ ವ್ಯಕ್ತಿಯಾಗಿ ಬದಲಾದ ಕಲ್ಪಿತ ಪಾತ್ರದ ಕಥೆಯ ಇತರೆ ಮಗ್ಗುಲುಗಳತ್ತ ಕಣ್ಣು ಹಾಯಿಸೋಣ. `ಹೊಳೆವ ಖನಿಜ' 'ವಿವಾದಿತ ಖನಿಜ' ಎಂದು ಕರೆಯಲ್ಪಡುವ `ಮೈಕಾ'ವನ್ನು ಮುಖ್ಯವಾಗಿ ಫೇಸ್ ಪೌಡರ್, ಐ ಶಾಡೋ, ನೇಲ್ ಪಾಲಿಶ್, ಲಿಪ್‌ಸ್ಟಿಕ್ ಮೊದಲಾದ ಪ್ರಸಾಧನ ಸಾಮಗ್ರಿಗಳ ತಯಾರಿಯಲ್ಲಿ ಬಳಸಲಾಗುತ್ತದೆ. ಮೈಕಾ ನಿಕ್ಷೇಪವು ಪ್ರಪಂಚದಲ್ಲೇ ಅತಿ ಹೆಚ್ಚು ಇರುವುದು ಭಾರತದಲ್ಲಿ. 1980ರವರೆಗೆ 700 ಗಣಿಗಳು, 20 ಸಾವಿರ ಕಾರ್ಮಿಕರಿಂದ ಪ್ರಪಂಚದ ಅತಿ ಹೆಚ್ಚು ಮೈಕಾ ಉತ್ಪಾದಕ ರಾಷ್ಟ್ರವಾಗಿತ್ತು ಭಾರತ. ಆನಂತರ ಹೊಸ ಲೀಸ್‌ಗಳನ್ನು ಮಂಜೂರು ಮಾಡುವುದನ್ನು ನಿಲ್ಲಿಸಿ, ನೂತನ ಅರಣ್ಯ ಸಂರಕ್ಷಣಾ ಕಾಯ್ದೆ ಮೂಲಕ ಬಿಗಿ ಕಾನೂನು ಕ್ರಮಗಳನ್ನು ಜಾರಿಗೆ ತಂದ ಪರಿಣಾಮವಾಗಿ 2000ನೇ ಇಸವಿ ಹೊತ್ತಿಗೆ ಜಾರ್ಖಂಡಿನ ನೂರಾರು ಗಣಿಗಳು ಸ್ಥಗಿತಗೊಂಡು, ಸಾವಿರಾರು ಕಾರ್ಮಿಕರು ಬೀದಿಪಾಲಾದರು.
ಹಾಗೆ ಸ್ಥಗಿತವಾದ ಈ ಗಣಿಗಳನ್ನು ಪಡೆದುಕೊಂಡ ಸ್ಥಳೀಯರು ಕಾನೂನುವಿರೋಧಿಯಾಗಿ ಗಣಿಗಾರಿಕೆ ಆರಂಭಿಸಿದರು. ಯಾರು ತುಸು ತಪ್ಪು ಮಾಡಿದರೂ, ಎಲ್ಲರೂ ಜೀವಸಮಾಧಿಯಾಗಬಹುದಾದ ಈ ಸುರಂಗಗಳೇ ಅಲ್ಲಿನ ಬಡಜನರ ಪಾಲಿನ ಅನ್ನದ ಬಟ್ಟಲುಗಳಾಗಿವೆ. ಈ ಗಣಿಗಾರಿಕೆಯೇ ಕಾನೂನುವಿರೋಧಿಯಾದ್ದರಿಂದ ಇಲ್ಲಿ ಘಟಿಸುವ ಸಾವುಗಳಿಗೆ ಪರಿಹಾರವೂ ಸಿಗುವುದಿಲ್ಲ. ಹೀಗೆ ತೆಗೆದ ಅದಿರಿನ ಪ್ರತಿ ಕೆ.ಜಿ.ಗೆ ₹ 7ರಂತೆ ಒಬ್ಬರಿಗೆ ದಿನಕ್ಕೆ ಗರಿಷ್ಠ ಸಿಗುವುದು ನೂರರಿಂದ ನೂರೈವತ್ತು ರೂಪಾಯಿ ಮಾತ್ರ. ಇವತ್ತಿಗೂ ಅಲ್ಲಿ ಪ್ರತಿ ತಿಂಗಳು 40ರಿಂದ 50 ಹೊಸ ಕ್ಷಯರೋಗದ ಕೇಸುಗಳು, 15-20 ಸಾವುಗಳು ಮತ್ತು ಲೆಕ್ಕವಿಲ್ಲದಷ್ಟು ರಕ್ತಹೀನತೆಯ ಪ್ರಕರಣಗಳು ವರದಿಯಾಗುತ್ತವೆ. ಜೀವಹಾನಿಯೇ ಈ ಮಟ್ಟದಲ್ಲಿರುವಾಗ ಗಣಿ ವಿಸ್ತರಣೆಗಾಗಿ ನಡೆಯುವ ಅಪಾರ ಪ್ರಮಾಣದ ಅರಣ್ಯನಾಶ, ಅಪರೂಪದ ವನ್ಯಜೀವಿಗಳ ಅಳಿವು ಮತ್ತು ಶಾಲೆಯಿಂದ ಹೊರಗುಳಿದ ಸಾವಿರಗಟ್ಟಲೆ ಬಾಲಕಾರ್ಮಿಕರ ಬಗ್ಗೆ ಹೇಳುವಂತೆಯೇ ಇಲ್ಲ. ಬಿಳಿಬಣ್ಣದ ಮೋಹದ ಸಂಕೇತವಾಗಿ ನಮ್ಮ ಮುಖಗಳ ಮೇಲೆ ಮೆತ್ತಿಕೊಂಡಿರುವ ಪ್ರಸಾಧನ ಸಾಮಗ್ರಿಗಳ ಹಿಂದೆ ಇಂಥ ಕರುಣಾರ್ದ್ರವಾದ ಭೀಕರ ವಾಸ್ತವವಿದೆ ಎಂಬುದು ಬಹುಜನರಿಗೆ ತಿಳಿದಿಲ್ಲ.
ಇಂದು ಪ್ರಸಾಧನ ಸಾಮಗ್ರಿಗಳ ವ್ಯವಹಾರವು ಮಿಲಿಯನ್ ಡಾಲರ್‌ಗಳ ಗಡಿ ದಾಟಿದೆ. ಹಾಗೆ ನೋಡಿದರೆ ವಿಕಾಸವಾದದ ಪ್ರಕಾರ ಮಿಲಿಯಾಂತರ ವರ್ಷಗಳ ಹಿಂದೆ ಈ ಭೂಮಿ ಮೇಲೆ ಮೊದಲ ಮಾನವ ಕಾಣಿಸಿಕೊಂಡಿದ್ದೇ ಆಫ್ರಿಕಾದಲ್ಲಿ. ಬ್ರಿಟಿಷರು ತಮ್ಮ ವಸಾಹತುಗಳನ್ನು ಜಗತ್ತಿನಾದ್ಯಂತ ಸ್ಥಾಪಿಸಿಕೊಂಡ ಮೇಲೆ 'ಆಳುವವರ ಬಣ್ಣವೇ ಶ್ರೇಷ್ಠವೆಂಬ ಬಲವಂತದ ಹೇರಿಕೆಯಲ್ಲಿ ಮತ್ತು ಅನಿವಾರ್ಯ ಒಪ್ಪಿಗೆಯಲ್ಲಿ' ಬಿಳಿಗೆ ಮಹತ್ವ ಬಂತು. ಹಾಗೆ ಸೌಂದರ್ಯ ನಿರ್ಧಾರಕ್ಕೆ ಒಂದು ಅಪಮಾರ್ಗ ಹಾಕಿಕೊಟ್ಟ ರಾಜಕಾರಣವು ಕಾಲಾನುಕ್ರಮದಲ್ಲಿ ಅದುವೇ ಸರಿಯಾದುದೆಂದು ಬಿಂಬಿಸಿ, ನಂಬಿಸಿ ಜಗತ್ತಿನ ಸೌಂದರ್ಯಕಲ್ಪನೆಯನ್ನೇ ಬುಡಮೇಲಾಗಿಸಿಬಿಟ್ಟಿತು. ಭಾರತದಂಥ ವಸಾಹತಿನಲ್ಲಿಯಂತೂ ಲಾಗಾಯ್ತಿನಿಂದ ಇದ್ದ ಜಾತಿಪದ್ಧತಿಯ ಮೇಲರಿಮೆಯೂ ಸೇರಿಕೊಂಡು ಗೌರವರ್ಣಕ್ಕೆ ಇನ್ನಿಲ್ಲದ ಪ್ರಾಶಸ್ತ್ಯ ಮತ್ತು ಪ್ರತಿಷ್ಠೆ ದೊರಕಿಬಿಟ್ಟಿತು. ಹಾಗೆ ಮನಸ್ಸಿಗೆ ಹೇಗೆ ನೋಡಬೇಕೆಂದು ಕಲಿಸಲಾಯಿತೋ, ಆ ದೃಷ್ಟಿಕೋನದಿಂದಲೇ ಕಣ್ಣುಗಳು ಬಣ್ಣವನ್ನು ನೋಡತೊಡಗಿ ಕಪ್ಪು ಕೀಳಾಯಿತು. ಮೇಕಪ್ಪು ಮೇಲಾಯಿತು. ಮೈಬಣ್ಣ ಸಹಜ, ಮೇಕಪ್ಪು ಕೃತಕ ಎಂಬುದನ್ನು ಮರೆತ ಅರ್ಥಹೀನ ಹುಸಿ ಮೇಲರಿಮೆಯ ವರ್ಣಬೇಧ ನೀತಿಯಿಂದಾಗಿ ಇಡೀ ಪ್ರಪಂಚ ಕೀಳ್ತನದ ಭಾರದಲ್ಲಿ ನಲುಗುವಂತಾಯಿತು.
21ನೇ ಶತಮಾನದ ಆಧುನಿಕ ಕಾಲದಲ್ಲೂ ಕಪ್ಪೆಂಬ ಕಾರಣಕ್ಕೆ ಜಾರ್ಜ್ ಫ್ಲಾಯ್ಡ್ ಹಾಡಹಗಲೇ ನಡುರಸ್ತೆಯಲ್ಲಿ ಅದೂ ಪ್ರಭುತ್ವ ಪ್ರತಿನಿಧಿಯಿಂದಲೇ ಕೊಲೆಯಾದರು. ಸ್ತ್ರೀಯರ ಕಥೆಯಂತೂ ಇನ್ನೂ ಗಂಭೀರವಾಗಿದೆ. ಇದರ ಬಗ್ಗೆ 1960ರಲ್ಲೇ ರಾಮಮನೋಹರ ಲೋಹಿಯಾ ಅವರು `ಸೌಂದರ್ಯ ಮತ್ತು ಮೈಬಣ್ಣ' (ಅನು: ಕೆ.ವಿ.ಸುಬ್ಬಣ್ಣ) ಎಂಬ ವಿಚಾರಪ್ರಚೋದಕ ಲೇಖನ ಬರೆದರು. ತಮ್ಮ ಕಾಲಕ್ಕಿಂತ ಮುಂದೆ ನಿಂತು ಯೋಚಿಸಬಲ್ಲವರಾಗಿದ್ದ ಲೋಹಿಯಾರವರು ಅದೇ ಲೇಖನದಲ್ಲಿ ಮುಂದುವರಿದು`ಕಪ್ಪು-ಬಿಳಿಗಳ ನಡುವೆ ಬಡತನ-ಶ್ರೀಮಂತಿಕೆಗಳ ನಡುವಿರುವಂತೆ ಅಸಂಖ್ಯಾತ ಮೆಟ್ಟಿಲುಗಳಿವೆ. ಕಡುಗಪ್ಪಿನಿಂದ ಶುರುವಾಗಿ ಕಡುಕಂದು, ಕಂದು, ಕೌಲು, ಎಣ್ಣೆಗೆಂಪು, ಗೋಧಿಗೆಂಪು, ತಿಳಿಹಳದಿ, ಗೌರವರ್ಣ, ಅಚ್ಚ ಬಿಳುಪುಗಳವರೆಗೆ ಈ ವ್ಯಾಪ್ತಿ ಹರಡಿದೆ. ಪ್ರತಿ ಮೆಟ್ಟಿಲೂ ತನ್ನನ್ನು ಮೇಲಿನವನಿಗೆ ಹತ್ತಿರವೆಂದು ಭಾವಿಸಿಕೊಂಡು ಇಲ್ಲದ ಮೇಲರಿಮೆಯಲ್ಲಿ ಮೆರೆಯಲು ತವಕಿಸುತ್ತದೆ. ಮೈಬಣ್ಣ ಮತ್ತು ಸೌಂದರ್ಯ ಅಂತರಗಳನ್ನು ಗುರುತಿಸುವಲ್ಲಿ ರಸಪ್ರಜ್ಞೆಯ ಒಂದು ಹೊಸಕ್ರಾಂತಿಯೇ ನಡೆಯಬೇಕು' ಎಂದು ಕರೆ ನೀಡಿದ್ದು ಇಂದಿಗೂ ಹೊಂದುವಂತಿದೆ.
ರಾಜಕಾರಣದ ನಂತರ ವೇದಿಕೆಗೆ ಪ್ರವೇಶಿಸಿದ ಮಾರುಕಟ್ಟೆಯು ಈ ವ್ಯತ್ಯಾಸ ಮತ್ತು ಕೀಳರಿಮೆಗಳನ್ನೇ ಬಂಡವಾಳವಾಗಿಸಿಕೊಂಡು ಬಹುದೊಡ್ಡ ಮಾರುಕಟ್ಟೆಯಾಗಿರುವ ತೃತೀಯ ಜಗತ್ತಿನ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು, ತನ್ನ ಗುರಿ ಸಾಧನೆಗಾಗಿ ಇಲ್ಲಿನವರ ಬದುಕನ್ನೇ ಪಣಕ್ಕೊಡ್ಡಿತು. ಮೈಯ ಬಣ್ಣಕ್ಕಿರುವ ವೈಜ್ಞಾನಿಕ ಕಾರಣ ಮತ್ತು ಅದನ್ನು ಮರೆಮಾಚುವಂತೆ ವ್ಯವಸ್ಥಿತವಾಗಿ ನಡೆದಿರುವ ಮಾರುಕಟ್ಟೆ ಪ್ರಣೀತ ರಾಜಕಾರಣದ ಅಬ್ಬರ- ಇವುಗಳ ಬಗ್ಗೆ ಪ್ರಭುತ್ವಗಳಿಗೆ, ಜನಸಾಮಾನ್ಯರಿಗೆ ತಿಳಿಹೇಳಬೇಕಾದ ಕೆಲಸವು ಪ್ರಸಾಧನ ಸಾಮಗ್ರಿಗಳ ಜಾಹೀರಾತುಗಳಷ್ಟು ವ್ಯವಸ್ಥಿತವಾಗಿ ಹಾಗೂ ಪ್ರಭಾವಶಾಲಿಯಾಗಿ ನಡೆಯಲೇ ಇಲ್ಲ.
ವೈಜ್ಞಾನಿಕವಾಗಿ ನೋಡಿದರೆ ನಮ್ಮ ಚರ್ಮ, ಕಣ್ಣು ಮತ್ತು ಕೂದಲುಗಳಿಗೆ ಬಣ್ಣ ಕೊಡುವುದು ಮೆಲನಿನ್ ಎಂಬ ದ್ರವ್ಯ. ಪ್ರತಿ ವ್ಯಕ್ತಿಯ ಚರ್ಮದಲ್ಲಿರುವ ಮೆಲನಿನ್ ಪ್ರಮಾಣವು ಅವರ ಜೀನ್ಸ್ಗಳಿಂದ ನಿರ್ಧಾರವಾಗುತ್ತದಾದ್ದರಿಂದ ಇದರಲ್ಲಿ ಆ ವ್ಯಕ್ತಿಯ ಪಾತ್ರವೇನಿಲ್ಲ. ಹಾಗಾಗಿ ಬಿಳುಪಿನವನ ಮೇಲರಿಮೆಯು ಕಪ್ಪಿನವನ ಕೀಳರಿಮೆಯಷ್ಟೇ ಅರ್ಥಹೀನವಾದುದು, ಅಕಾರಣವಾದುದು ಮತ್ತು ಬಾಲಿಶವಾದುದು. ಹಾಗೆ ನೋಡಿದರೆ ಮೆಲನಿನ್ ಸಾಂದ್ರವಾಗಿರುವ ಕಪ್ಪು ಬಣ್ಣವು ತಕ್ಕ ಮಟ್ಟಿಗೆ ಸುಕ್ಕುಗಳಿಂದ, ಕ್ಯಾನ್ಸರಿನ ಸಾಧ್ಯತೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಅಂದರೆ ಕಪ್ಪಿನ ಕೀಳಿಗೆ ಕಾರಣ ಆರೋಗ್ಯಸಂಬಂಧಿ ವಾಸ್ತವದೊಳಗೂ ಇಲ್ಲವೆಂದಾಯಿತು.
ನಮ್ಮ ಆತ್ಮಗೌರವವನ್ನು ಅಣಕಿಸುವ, ಕಪ್ಪಿನ ಕುರಿತ ಅಸೂಕ್ಷ್ಮ ಜೋಕುಗಳು ಆಳದಲ್ಲಿ ಇಂಥ ಸುಪ್ತ ಜನಾಂಗೀಯ ದ್ವೇಷದ ಪೂರ್ವಗ್ರಹ ಧೋರಣೆಯಿಂದ ಪ್ರಭಾವಿತವಾದಂಥವು ಎಂದು ನಾವು ಅರಿಯಬೇಕಾದ ಅಗತ್ಯವಿದೆ. ಸಾಯಿಪಲ್ಲವಿ ಎಂಬ ಭಾರತೀಯ ನಟಿ 2 ಕೋಟಿ ರೂಪಾಯಿಯ ಫೇರ್‌ನೆಸ್ ಕ್ರೀಮ್ ಬ್ರ್ಯಾಂಡ್‌ನ ಜಾಹೀರಾತನ್ನು ನಿರಾಕರಿಸಿದ್ದರು. ಆಕೆ `ಸುಂದರ ತ್ವಚೆಯೇ ಸೌಂದರ್ಯದ ಮಾನದಂಡ ಎಂಬುದೇ ಒಂದು ಅಸಂಬದ್ಧ' ಎಂದಾಗ ಜನ ಹುಬ್ಬೇರಿಸಿದ್ದರು. ರಣಬೀರ್ ಕಪೂರ್ ಕೂಡ ಇದೇ ಥರದ ಕಾರಣ ನೀಡಿ 9 ಕೋಟಿ ರೂಪಾಯಿಯ ಜಾಹೀರಾತಿನಲ್ಲಿ ನಟಿಸಲು ನಿರಾಕರಿಸಿದ್ದರು. `ಸೌಂದರ್ಯವರ್ಧಕ ಜಾಹೀರಾತುಗಳಿಂದ ಲಕ್ಷಾಂತರ ಯುವತಿಯರು ಕೀಳರಿಮೆ, ಹಿಂಜರಿಕೆ ಅನುಭವಿಸುತ್ತಿದ್ದಾರೆ' ಎನ್ನುವ ನಟಿ ನಂದಿತಾ ದಾಸ್ ಅವರು `ಡಾರ್ಕ್ ಈಸ್ ಬ್ಯೂಟಿಫುಲ್' ಎಂಬ ಆಂದೋಲನವನ್ನೇ ನಡೆಸುತ್ತಿದ್ದಾರೆ.
ಹಾಗೆ ನೋಡಿದರೆ `ಸೌಂದರ್ಯವರ್ಧಕ' ಎಂಬ ಪದವೇ ತಪ್ಪು. ಅದು ಉದ್ದೇಶಪೂರ್ವಕವಾಗಿ, ಪ್ರಜ್ಞಾಪೂರ್ವಕವಾಗಿ ಟಂಕಿಸಲಾದ ಒಂದು ಮಹಾಮೋಸದ ಪದಪುಂಜ. ಅವೇನಿದ್ದರೂ ಕೇವಲ ಪ್ರಸಾಧನ ಸಾಮಗ್ರಿಗಳಷ್ಟೇ ಎಂಬುದು ನಮಗೆ ತಿಳಿಯಬೇಕು. ತಾಪ್ಸಿ ಪನ್ನು, ಕಲ್ಕಿ, ಸೋನಾ ಮೊಹಾಪಾತ್ರಾ, ಅನುಷ್ಕಾ ಶರ್ಮಾ, ಸೋನಾಲ್ ಸೆಹಗಲ್ (ಡ್ಯಾನ್ಸಿಂಗ್ ಇನ್ ದ ಡಾರ್ಕ್ ಖ್ಯಾತಿ) ಮುಂತಾದ ಎಷ್ಟೋ ಜನ ಬೇರೆ ಬೇರೆ ವಿಧದಲ್ಲಿ ಈ ಅತಿ ಸೂಕ್ಷ್ಮ ಕ್ರೌರ್ಯದ ವಿರುದ್ಧ ದನಿಯೆತ್ತಿದ್ದನ್ನು ಗುರುತಿಸಿ ಗೌರವಿಸಬೇಕು.
ಇದಕ್ಕೊಂದು ತಕ್ಕಮಟ್ಟಿಗಿನ ಪರಿಹಾರವೆಂದರೆ ಎಲ್ಲ ರಂಗದಲ್ಲಿರುವ ಭಾರತೀಯ ಸೆಲೆಬ್ರಿಟಿಗಳು ಮೊದಲು `ನಮ್ಮ ಮೈಬಣ್ಣ, ನಮ್ಮ ಅಸ್ಮಿತೆ' ಎಂದು ಗಟ್ಟಿಯಾಗಿ ಹೇಳುವಂತಾಗಬೇಕು. ಇದು ಅವರ ಮಿಲಿಯಗಟ್ಟಲೆ ಅಭಿಮಾನಿಗಳ ಮನಃಸ್ಥಿತಿಯನ್ನು ನಿಧಾನವಾಗಿಯಾದರೂ ಬದಲಿಸಬಹುದು. ಆಗ ಚಿತ್ರರಂಗಗಳು ಕೂಡ ನಟರ ಮೈಬಣ್ಣದ ವಿಚಾರದಲ್ಲಿ ತೋರಿರುವ ಉದಾರಭಾವವನ್ನು ನಟಿಯರಿಗೂ ವಿಸ್ತರಿಸಲು ಕಲಿಯುತ್ತವೇನೋ. ಸೆಲೆಬ್ರಿಟಿಗಳು, ನಟರಲ್ಲದೆ; ಅಧಿಕಾರಿಗಳು, ಶಿಕ್ಷಕರು ಮತ್ತು ಮಾಧ್ಯಮಗಳಂಥ ಅಭಿಪ್ರಾಯ ಮುಖಂಡರ ಮೂಲಕವೂ ಈ ಅಭಿಯಾನವು ಎಲ್ಲ ರಂಗಗಳಲ್ಲಿ, ಎಲ್ಲ ದಿಕ್ಕುಗಳಲ್ಲಿ ಹರಡಬೇಕು. ಹಾಗಾದಾಗಲೇ ಅತಿ ಮೇಕಪ್ಪಿನಲ್ಲಿರುವ ಒಬ್ಬ ಅಪ್ರಬುದ್ಧ ವ್ಯಕ್ತಿಯು, ಮೈಕಾ ಗಣಿಗಳಲ್ಲಿ ಮಣ್ಣಾದವರ ರಕ್ತವನ್ನು ಮೆತ್ತಿಕೊಂಡ ರಾಕ್ಷಸನಂತೆ ನಮಗೆ ಕಾಣಿಸಬಹುದು. ಅದೇ ಸಂದರ್ಭಕ್ಕೆ ಸಹಜ ಅಂತಃಶಕ್ತಿಯಿಂದ, ವಿದ್ವತ್ ಪ್ರತಿಭೆಯಿಂದ, ಉದಾತ್ತ ಗುಣದಿಂದ ಭೂಷಿತರಾದವರು ಕಪ್ಪಾದರೂ ತ್ರಿಭುವನ ಸುಂದರರೆಂದು ಅರಿತು ಪಾಲಿಸುವಷ್ಟು ನಮ್ಮ ದೃಷ್ಟಿಕೋನ ಸೂಕ್ಷ್ಮವಾಗಬಹುದು. ಆಗ ಮಾತ್ರ ಕಥೆ ಪುಸ್ತಕಗಳಲ್ಲಿ ಪಾತ್ರವಾಗಿರುವ ರಾಣಿಯಂಥವರು ನಿಜದ ವ್ಯಕ್ತಿತ್ವಗಳೇ ಆಗಿ ಉದಿಸುವಂಥ ಹಾದಿ ಇನ್ನಷ್ಟು ಸುಗಮವಾಗಿ`ರಸಪ್ರಜ್ಞೆಯ ಹೊಸ ಕ್ರಾಂತಿ' ನಡೆಯಬಹುದು.