ಕೋಲ್ಹಾಪುರ: ಹಳ್ಳಿಗಳಲ್ಲಿ ಇಂದಿಗೂ ಕುಡಿಯುವ ನೀರಿನ ಸಮಸ್ಯೆ ಕಾಣಬಹುದು. ನೀರಿಗಾಗಿ ದಿನನಿತ್ಯ ಜಗಳಗಳೂ, ಪ್ರತಿಭಟನೆಗಳೂ ಕೂಡ ನಡೆಯುತ್ತಿರುತ್ತವೆ. ಆದರೆ ಇಲ್ಲೊಂದು ನವದಂಪತಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿಕೊಡಬೇಕೆಂದು ತಮ್ಮ ಹನಿಮೂನ್ ಅನ್ನೇ ತ್ಯಾಗ ಮಾಡಿರುವ ಅಪರೂಪದ ಘಟನೆ ಮಹಾರಾಷ್ಟ್ರದ ಕೋಲ್ಹಾಪುರದಲ್ಲಿ ನಡೆದಿದೆ.
ನಿನ್ನೆಯಷ್ಟೇ ಹೊಸಜೀವನಕ್ಕೆ ಕಾಲಿಟ್ಟ ಈ ದಂಪತಿಯನ್ನು ಮೆರವಣಿಗೆ ಮಾಡಲಾಯಿತು. ಈ ವೇಳೆ ತಾವು ಮೆರವಣಿಗೆ ಹೊರಟಿದ್ದ ವಾಹನದ ಮೇಲೆ ನೀರಿನ ಸಮಸ್ಯೆ ಬಗೆಹರಿಸುವವರೆಗೂ ನಾವು ಹನಿಮೂನ್ಗೆ ಹೋಗಲ್ಲ ಎಂದು ಬರೆಯಲಾಗಿತ್ತು.
ಮದುವೆ ವರದಕ್ಷಿಣೆ ರೂಪದಲ್ಲಿ ನೀರಿನ ಟ್ಯಾಂಕ್ ಪಡೆಯಲಾಗಿದ್ದು, ನೀರಿನ ಸಮಸ್ಯೆ ಬಗೆಹರಿಸದ ಮಹಾನಗರ ಪಾಲಿಕೆ ವಿರುದ್ಧ ಈ ರೀತಿ ಆಕ್ರೋಶ ಹೊರಹಾಕಿದ್ದಾರೆ. ಇಲ್ಲಿನ ಪೇಟೆ ಬಡಾವಣೆಯಲ್ಲಿ ಕಳೆದ ಆರು ತಿಂಗಳಿನಿಂದ ನೀರು ಸಿಗದೇ ಜನರು ಪರದಾಡುತ್ತಿದ್ದಾರೆ. ಇದರಿಂದ ಬೇಸತ್ತ ಈ ನವಜೋಡಿ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಈ ಮೂಲಕ ಒತ್ತಾಯಿಸಿದ್ದಾರೆ.
ವಿಶಾಲ್ ಹಾಗೂ ಅಪರ್ಣಾ ಈ ನವದಂಪತಿ ಈಗ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಪಟ್ಟು ಹಿಡಿದು ಕುಳಿತಿದ್ದಾರೆ. ವಿಶಾಲ್ ವರದಕ್ಷಿಣೆ ರೂಪದಲ್ಲಿ ನೀರಿನ ಟ್ಯಾಂಕರ್ ಕೊಡಿಸಬೇಕೆಂದು ಮಾಡಿದ್ದ ಮನವಿಯಂತೆ ಟ್ಯಾಂಕರ್ಅನ್ನು ಕೊಡಿಸಲಾಗಿತ್ತು.