ಕುಂಬಳೆ: ಗಡಿನಾಡಿನಲ್ಲಿ ಕನ್ನಡಪರ ಚಟುವಟಿಕೆಗಳಿಂದ ಇಲ್ಲಿ ಕನ್ನಡ ಭಾಷೆ ಹೆಚ್ಚು ಸಮೃದ್ಧವಾಗಿದೆ ಎಂದು ವಿಧಾನಪರಿಷತ್ ವಿರೋಧಪಕ್ಷದ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್ ತಿಳಿಸಿದ್ದಾರೆ.
ಅವರು ಕುಂಬಳೆ ಸನಿಹದ ನಾರಾಯಣಮಂಗಲ ಅನುದಾಣಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಗಡಿನಾಡಿನಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ನಡೆಸುತ್ತಿರುವ ಹೋರಾಟ ಶ್ಲಾಘನೀಯ. ಶತಮಾನ ಕಂಡ ನಾರಾಯಣಮಂಗಲ ಶಾಲೆಯಲ್ಲಿ ಕನ್ನಡವನ್ನು ಪೋಷಿಸುತ್ತಿರುವ ಇಲ್ಲಿನ ಕನ್ನಡಿಗರು ಹಾಗೂ ಕನ್ನಡ ಅಧ್ಯಾಪಕರ ಸಮರ್ಪಣಾ ಮನೋಭಾವ ಸಮಾಜಕ್ಕೆ ಮದರಿಯಾಗಿರುವುದಾಗಿ ತಿಳಿಸಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ವಿಶಾಲಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಗ್ರಾಪಂ ಸದಸ್ಯೆ ಸುಲೋಚನಾ, ಹಿರಿಯ ಜಾಣಪದ ಹಾಡುಗಾರ ಗೊ.ನಾ ಸ್ವಾಮಿ, ಸಾಹಿತಿ ಪ್ರಭಾಕರ ಕಲ್ಲೂರಾಯ ಬನದಗದ್ದೆ, ಹರಿದಾಸ ಜಯಾನಂದ ಕುಮಾರ್, ಅರಿಬೈಲು ಗೋಪಾಲ ಶೆಟ್ಟಿ, ವಾಮನರಾವ್ ಬೇಕಲ್, ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ಕಾರ್ಯದರ್ಶಿ ಗಂಗಾಧರ ತೆಕ್ಕೆಮೂಲೆ, ಶಾಲಾ ಮದರ್ ಪಿಟಿಎ ಅಧ್ಯಕ್ಷೆ ಲಕ್ಷ್ಮೀ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಸ್ಮಿತಾ ಕುಮಾರಿ ಸ್ವಾಗತಿಸಿದರು. ಆಡಳಿತ ಮಂಡಳಿ ಕಾರ್ಯದರ್ಶಿ ಶ್ಯಾಮಪ್ರಸಾದ್ ಕಬೆಕ್ಕೋಡು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಐತ್ತಪ್ಪ ಕುಲಾಲ್ ವಂದಿಸಿದರು.