ಮೀರತ್: ಇಲ್ಲಿನ ಮಾಲ್ ಒಂದರಲ್ಲಿ ನಮಾಜ್ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಮೀರತ್ ಪೊಲೀಸರಿಂದ ಉತ್ತರ ಪ್ರದೇಶ ಡಿಜಿಪಿ ವರದಿ ಕೇಳಿದ್ದಾರೆ.
ಬಿಜೆಪಿಯ ಐಟಿ ಸೆಲ್‌ನ ಜಿಲ್ಲಾ ಸಂಚಾಲಕ ದಿಗ್ವಿಜಯ್ ಸಿಂಗ್ ಎಂಬುವವರು ವ್ಯಕ್ತಿಯೊಬ್ಬರು ಮಾಲ್‌ನಲ್ಲಿ ನಮಾಜ್ ಮಾಡುತ್ತಿರುವ ವಿಡಿಯೊವನ್ನು ಪೋಸ್ಟ್ ಮಾಡಿದ್ದರು.
ಇದಕ್ಕೆ ಮೀರತ್ ಪೊಲೀಸ್ ಖಾತೆಯನ್ನು ಟ್ಯಾಗ್ ಮಾಡಿದ್ದರು.
ಮೂಲಗಳ ಪ್ರಕಾರ, ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿರುವುದು ಮೀರತ್‌ನ ಸೊಹ್ರಾನ್ ಗೇಟ್‌ನ ಶಾಪಿಂಗ್ ಮಾಲ್‌ನ ವಿಡಿಯೊ ಎನ್ನಲಾಗಿದೆ. ಇದರಲ್ಲಿ ವ್ಯಕ್ತಿಯೊಬ್ಬರು ನಮಾಜ್ ಮಾಡುವುದು ಕಾಣಿಸುತ್ತಿದೆ.
ಈ ವಿಚಾರವಾಗಿ ತನಿಖೆ ನಡೆಸಲಾಗುತ್ತಿದೆ. ವಿಡಿಯೊದಲ್ಲಿ ಕಾಣಿಸುವ ವ್ಯಕ್ತಿಯ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ನೌಚಾಂದಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಲಖನೌನ ಲುಲು ಮಾಲ್‌ನಲ್ಲಿ ನಮಾಜ್ ಮಾಡಿದ್ದ ಪ್ರಕರಣ ವಿವಾದಕ್ಕೀಡಾಗಿತ್ತು. ಲುಲು ಮಾಲ್‌ನಲ್ಲಿ ಮುಸ್ಲಿಂ ಯುವಕರು ನಮಾಜ್ ಮಾಡಿದ್ದಾರೆಂದು ಆರೋಪಿಸಿ ಮಾಲ್ ಅನ್ನು 'ಪವಿತ್ರ'ಗೊಳಿಸಲು ತೆರಳಿದ ಆರೋಪ ಸಂಬಂಧ ಅಯೋಧ್ಯೆ ಮೂಲದ ಸಂತ ಪರಮಹಂಸ ಆಚಾರ್ಯ ಎಂಬುವರನ್ನು ಪೊಲೀಸರು ಬಂಧಿಸಿದ್ದರು.
ಬಳಿಕ, ಸಾರ್ವಜನಿಕ ಪ್ರದೇಶಗಳಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂದು ಸೂಚಿಸಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಇಂಥ ಚಟುವಟಿಕೆಗಳ ತಡೆಗೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದರು.