ಲಖನೌ: ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಾಮ ಮಂದಿರದ ಪ್ಲಿಂತ್ ಆಗಸ್ಟ್‌ನಲ್ಲಿ ಪೂರ್ಣಗೊಳ್ಳಲಿದ್ದು, ಗರ್ಭಗುಡಿಯಲ್ಲಿ ಕೆತ್ತಿದ ಕಲ್ಲುಗಳಿಂದ ಮಾಡಲಾಗುತ್ತಿರುವ ಪರಿಕ್ರಮ ಪಥದ(ಪ್ರದಕ್ಷಿಣೆ ಪಥ) ಶೇಕಡಾ 30-40 ರಷ್ಟು ಕೆಲಸಗಳು ಆಗಸ್ಟ್‌ನಲ್ಲಿ ಪೂರ್ಣಗೊಳ್ಳಲಿವೆ.
ದೇವಾಲಯದ ನಿರ್ಮಾಣ ಕಾರ್ಯದ ಬಗ್ಗೆ ವಿವರಗಳನ್ನು ಹಂಚಿಕೊಂಡ ದೇವಾಲಯ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು, ಪ್ಲಿಂತ್ ನ ಮುಕ್ಕಾಲು ಭಾಗದಷ್ಟು ಕೆಲಸ ಪೂರ್ಣಗೊಂಡಿದೆ. ಪ್ಲಿಂತ್ ಕಾಮಗಾರಿ ಒಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಇದರೊಂದಿಗೆ ಗರ್ಭಗುಡಿಯ ಕಾಮಗಾರಿಯೂ ತ್ವರಿತಗತಿಯಲ್ಲಿ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಕಳೆದ ಎರಡು ತಿಂಗಳಲ್ಲಿ ಬನ್ಸಿ ಪಹಾರ್‌ಪುರದಿಂದ 200ಕ್ಕೂ ಹೆಚ್ಚು ಕೆತ್ತನೆಯ ಗುಲಾಬಿ ಕಲ್ಲುಗಳನ್ನು ತಂದು ಸ್ಥಾಪಿಸಲಾಗಿದೆ. ಗರ್ಭಗುಡಿಯ ಪಶ್ಚಿಮ ಭಾಗದಲ್ಲಿರುವ ಪರಿಕ್ರಮ ಪಥ ಶೀಘ್ರದಲ್ಲಿಯೇ ಸಂಪೂರ್ಣ ಸಿದ್ಧವಾಗಲಿದೆ’ ಎಂದು ಚಂಪತ್ ರೈ ತಿಳಿಸಿದ್ದಾರೆ.
ರಾಮಜನ್ಮಭೂಮಿ ಸಂಕೀರ್ಣದಲ್ಲಿ ನಡೆಯುತ್ತಿರುವ ನಿರ್ಮಾಣ ಕಾರ್ಯವನ್ನು ದೇವಾಲಯದ ಟ್ರಸ್ಟ್ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ಇದಲ್ಲದೆ, ಮಾಜಿ ಐಎಎಸ್ ಅಧಿಕಾರಿ ನೃಪೇಂದ್ರ ಮಿಶ್ರಾ ನೇತೃತ್ವದ ನಿರ್ಮಾಣ ಸಮಿತಿಯು ಗರ್ಭಗುಡಿಯಲ್ಲಿನ ಸ್ತಂಭಗಳ ದಪ್ಪವನ್ನು ಮೂರು ಇಂಚುಗಳಷ್ಟು ಹೆಚ್ಚಿಸಲು ನಿರ್ಧರಿಸಿದೆ. ಅವು ದೇವಾಲಯದ ಬಾರವನ್ನು ತಡೆದುಕೊಳ್ಳುತ್ತವೆ ಎಂದು ಹೇಳಿದ್ದಾರೆ.