ಬೆಂಗಳೂರು: ವನ್ಯ ಸಂಕುಲದಲ್ಲಿ ಹುಲಿ ಹೆಗ್ಗುರುತು. ಕಾಡಿಗೆ ಮಳೆ ಎಷ್ಟು ಮುಖ್ಯವೋ, ಕಾಡಿಗೆ ಹುಲಿಯು ಅಷ್ಟೇ ಮುಖ್ಯ.
ಭಾರತ ಸೇರಿದಂತೆ ಪ್ರಪಂಚದ ಅನೇಕ ಕಾಡುಗಳಲ್ಲಿ ಕಂಡು ಬರುವ ಹುಲಿಗಳು ಸಹಜವಾಗಿ ಕೇಸರಿ ಬಣ್ಣದ, ಗಾಂಭೀರ್ಯದ ನೋಟದೊಂದಿಗೆ ನೋಡುಗರ ಕಣ್ಮನ ಸೆಳೆಯುತ್ತವೆ.
ಅಪರೂಪಕ್ಕೆ ಎಂಬಂತೆ ಪ್ರಪಂಚದ ಅನೇಕ ಕಡೆ ಬಿಳಿ ಹುಲಿಗಳು ಇವೆ.
ಆದರೆ, ಅಪರೂಪದಲ್ಲೇ ಅಪರೂಪದ್ದು ಎನ್ನಬುದಾದ ಕಪ್ಪು ಹುಲಿ ಭಾರತದ ಒಡಿಶಾದ ಕಾಡಿನಲ್ಲಿ ಇದೆ. ಇದು ಕಾಡಿನಲ್ಲಿ ಸಫಾರಿಗೆ ಹೋದವರ ಕಣ್ಣಿಗೆ ಕಾಣುವುದು ಕೂಡ ವಿರಳಾತಿವಿರಳ.
ಇದೀಗ ಈ ಕಪ್ಪು ಹುಲಿ ಕಾಡಿನಲ್ಲಿಟ್ಟಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೊ ವೈರಲ್ ಆಗಿದೆ. ಹಿರಿಯ ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಹುಲಿ ದಿನದ ಪ್ರಯುಕ್ತ (ಜು.29) ವಿಡಿಯೊ ಶೇರ್ ಮಾಡಿಕೊಂಡಿದ್ದರು.
ಒಡಿಶಾದ 'ಸಿಮ್ಲಿಪಾಲ್ ನ್ಯಾಷನಲ್ ಪಾರ್ಕ್'ನಲ್ಲಿ ಈ ಕಪ್ಪು ಹುಲಿಯ ಚಲನವಲನಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕಪ್ಪು ಹುಲಿ ಪರಚುತ್ತಾ ಗಿಡ ಹತ್ತಲು ವಿಫಲ ಯತ್ನ ನಡೆಸುತ್ತದೆ. ಇಂತಹ ಅಪರೂಪದ ವಿಡಿಯೊ ಶೇರ್ ಮಾಡಿಕೊಂಡಿದ್ದಕ್ಕೆ ಅಧಿಕಾರಿಗೆ ನೆಟ್ಟಿಗರು ಧನ್ಯವಾದ ಸಲ್ಲಿಸಿದ್ದಾರೆ.
ಪ್ರಪಂಚದಲ್ಲಿ ಸದ್ಯ 3900 ಹುಲಿಗಳು ಇದ್ದು ಇದರಲ್ಲಿ ಭಾರತದಲ್ಲಿ 1900 ಹುಲಿಗಳು ಇವೆ. ಕರ್ನಾಟಕದಲ್ಲಿ ಸುಮಾರು 400 ಹುಲಿಗಳು ಇವೆ. ಪ್ರಪಂಚದಲ್ಲಿ ಐದು ಅಥವಾ ಆರು ಕಪ್ಪು ಹುಲಿಗಳು ಇರಬಹುದು ಎಂದು ಅಂದಾಜಿಸಲಾಗಿದೆ. ಸುಮಾತ್ರಾ ಹುಲಿ ಅಳವಿನಂಚಿನಲ್ಲಿರುವ ಹುಲಿಯಾಗಿದೆ.