ತಿರುವನಂತಪುರಂ: ಸಮಾಜಕ್ಕೆ ಮಾರಕವಾಗಿರುವ ಆನ್ಲೈನ್ ರಮ್ಮಿ ಗೇಮ್ಗೆ ಸಿನಿಮಾ ಕಲಾವಿದರು ಜಾಹೀರಾತು ನೀಡುವುದನ್ನು ತಡೆಯಲು ಸರ್ಕಾರದ ಮಧ್ಯಸ್ಥಿಕೆ ವಹಿಸಬೇಕಿದೆ ಎಂದು ಕೇರಳದ ಶಾಸಕ ಕೆ.ಬಿ. ಗಣೇಶ್ ಕುಮಾರ್ ಎಂಬುವರು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.
ಗೌರವಾನ್ವಿತ ಕಲಾವಿದರು ರಮ್ಮಿ ಗೇಮ್ನಂತಹ ಸಮಾಜ ವಿರೋಧಿ ಜಾಹೀರಾತುಗಳಲ್ಲಿ ಭಾಗವಹಿಸುತ್ತಿದ್ದಾರೆ. ನಟ ಶಾರೂಖ್ ಖಾನ್ ಭಾರತದ ಅತ್ಯಂತ ಶ್ರೇಷ್ಠ ನಟ. ಅವರೇನು ಬಡವರಲ್ಲ. ಹಾಗೆಯೇ ವಿರಾಟ್ ಕೊಹ್ಲಿ ಸಹ ಭಿಕ್ಷುಕರಲ್ಲ. ಇಂತಹ ಜಾಹೀರಾತುಗಳು ಅವರಿಗೆ ಅನಿವಾರ್ಯವೇನಿಲ್ಲ. ಹಾಗೇ ವಿಜಯ್ ಯೇಸುದಾಸ್, ರಿಮಿ ಟಾಮಿ ಮತ್ತು ಲಾಲ್ ಸೇರಿದಂತೆ ಹಲವರನ್ನು ಇಂತಹ ಜಾಹೀರಾತುಗಳಲ್ಲಿ ನೋಡುತ್ತಿದ್ದೇವೆ. ಇವರೆಲ್ಲ ಇಂತಹ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಬಾರದು ಎಂದರು.
ಇಂತಹ ಅಪಾಯಕಾರಿ ಜಾಹೀರಾತುಗಳಿಂದ ಹಿಂದೆ ಸರಿಯುವಂತೆ ಕಲಾವಿದರ ಬಳಿ ಸಾಂಸ್ಕೃತಿಕ ವ್ಯವಹಾರಗಳ ಸಚಿವರು ಮನವಿ ಮಾಡಬೇಕು. ಕೆಲ ಕಲಾವಿದರು ತಮ್ಮಷ್ಟಕ್ಕೆ ತಾವು ಸಾಂಸ್ಕೃತಿಕವಾಗಿ ಗೌರವಾನ್ವಿತ ಜನರು ಎಂದು ಕರೆದುಕೊಳ್ಳುತ್ತಾರೆ. ಅಂತಹ ಕಲಾವಿದರು ಮೊದಲು ಇಂತಹ ಜಾಹೀರಾತುಗಳನ್ನು ತಿರಸ್ಕರಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಲಾವಿದರ ಸಂಘದ ಬಳಿ ಮನವಿ ಮಾಡಿರುವ ಶಾಸಕ ಗಣೇಶ್, ಆನ್ಲೈನ್ ರಮ್ಮಿಗೆ ದಾಸರಾಗಿ ಅನೇಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂಬುದನ್ನು ಪರಿಗಣಿಸಬೇಕು ಎಂದಿದ್ದಾರೆ.
ಆದರೆ, ಇವುಗಳನ್ನು ಕಾನೂನಿನ ಮೂಲಕ ನಿಯಂತ್ರಿಸಲು ಸಾಧ್ಯವಿಲ್ಲ ಮತ್ತು ಮೊದಲು ಜನರ ಮನಸ್ಸಿನಲ್ಲಿ ಈ ಬಗ್ಗೆ ಸಾಂಸ್ಕೃತಿಕ ಕ್ರಾಂತಿ ನಡೆಯಬೇಕು ಎಂದು ಸಚಿವ.ವಿ ಎನ್.ವಾಸವನ್ ಅವರು ಗಣೇಶ್ ಅವರಿಗೆ ಉತ್ತರಿಸಿದರು. ಅಂತಹ ಜಾಹೀರಾತುಗಳಿಂದ ಹಿಂದೆ ಸರಿಯುವಂತೆ ನಾವೆಲ್ಲರೂ ಕಲಾವಿದರನ್ನು ವಿನಂತಿಸಬಹುದು ಎಂದರು.