ಭೂಪಾಲ್: ಮುಖ್ಯಮಂತ್ರಿ ಭೇಟಿ ವೇಳೆ ಕಳಪೆ ಮಟ್ಟದ ಟೀ ನೀಡಿದ್ದರಿಂದ ಕಿರಿಯ ಅಧಿಕಾರಿಯೊಬ್ಬರು ಈಗ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಛಾತರ್ಪುರ್ ಜಿಲ್ಲೆಯ ಖುಜುರಾಹೋ ಭೇಟಿ ಸಂದರ್ಭದಲ್ಲಿ ವಿಮಾನನಿಲ್ದಾಣಕ್ಕೆ ಆಗಮಿಸಿದ್ದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಟೀ ನೀಡಲಾಗಿತ್ತು.
ಕಿರಿಯ ಅಧಿಕಾರಿ ರಾಕೇಶ್ ಕನೌಹ್ಹಾ ಎಂಬುವರು ಮುಖ್ಯಮಂತ್ರಿ ಟೀ ತಾವೇ ನೀಡಿದ್ದರು. ಅಧಿಕಾರಿಯೇ ಟೀ ನೀಡುವ ಮೂಲಕ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಲ್ಲದೇ, ಕಳಪೆ ಟೀ ನೀಡಿರುವುದರಿಂದ ನೋಟಿಸ್ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಿಪಿ ದ್ವಿವೇದಿ ಹೇಳಿದ್ದಾರೆ.
ಕರ್ತವ್ಯದಲ್ಲಿರುವ ವೇಳೆಯೇ ಟೀ ತಂದುಕೊಟ್ಟು ಶಿಷ್ಟಾಚಾರ ಉಲ್ಲಂಘಿಸಿದ್ದಲ್ಲದೇ, ಕಳಪೆ ಟೀ ನೀಡಿದ ನಿಮ್ಮ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. ಮೂರು ದಿನದೊಳಗೆ ಉತ್ತರಿಸಬೇಕು ಇಲ್ಲದಿದ್ದರೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.