ನವದೆಹಲಿ :ಹಿಂದೂಯೇತರ ಸಮುದಾಯಗಳಲ್ಲಿರುವ ಶೋಷಿತ ಹಾಗೂ ದಮನಿತರನ್ನ ಪಕ್ಷವು ತಲುಪಬೇಕಾಗಿದೆಯೆಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ಕರೆ ನೀಡಿದ್ದಾರೆ
ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಉತ್ತರಪ್ರದೇಶದ ಅಝಂಗಢ ಹಾಗೂ ರಾಮಪುರದಲ್ಲಿ ಇತ್ತೀಚೆಗೆ ನಡೆದ ಲೋಕಸಭಾ ಉಪಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ ಒಂದು ವಾರದ ಬಳಿಕ ಮೋದಿ ಈ ಅಭಿಪ್ರಾಯ ವ್ಯಕ್ತಪಡಿಸಿರುವುದು ಗಮನಾರ್ಹವಾಗಿದೆ. ಈ ಎರಡು ಕ್ಷೇತ್ರಗಳಲ್ಲಿ ಮುಸ್ಲಿಂ ಸಮುದಾಯದ ಮತಗಳು ನಿರ್ಣಾಯಕವಾಗಿವೆ. ಮುಸ್ಲಿಂ ಸಮುದಾಯದಲ್ಲಿ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅತ್ಯಂತ ಹಿಂದುಳಿದಿರುವ ಪಾಸ್‌ಮಂಡಾ ಮುಸ್ಲಿಮರಂತಹ ವರ್ಗಗಳನ್ನು ಪಕ್ಷವು ತಲುಪಬೇಕೆಂಬುದೇ ಪ್ರಧಾನಿಯ ಸಂದೇಶವಾಗಿದೆಯೆಂದು ಬಿಜೆಪಿಯ ಮೂಲಗಳು ತಿಳಿಸಿವೆ.
''ಈ ಹಿಂದೆಯೂ ಬಿಜೆಪಿಯು ಪಾಸ್‌ಮಂಡಾ ಮುಸ್ಲಿಂ ಸಮುದಾಯವನ್ನು ತಲುಪುವ ಪ್ರಯತ್ನಗಳನ್ನು ಮಾಡಿತ್ತು ಹಾಗೂ ಇತ್ತೀಚೆಗೆ ನಡೆದ ಉಪಚುನಾವಣೆಗಳಲ್ಲಿ ಈ ಸಮುದಾಯದ ಮತಗಳು ಬಿಜೆಪಿಯನ್ನು ಬೆಂಬಲಿಸಿದ್ದವು'' ಎಂದು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ. ಉತ್ತರಪ್ರದೇಶದಲ್ಲಿ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ಸರಕಾರವು ಮರಳಿ ಅಧಿಕಾರಕ್ಕೇರಿದ ಬಳಿಕ ಪಾಸ್‌ಮಂಡಾ ಮುಸ್ಲಿಂ ಸಮುದಾಯದ ನಾಯಕ ದಾನಿಶ್ ಆಝಾದ್ ಅವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಿತ್ತು.
ತನ್ನ ಗಣನೀಯ ಉಪಸ್ಥಿತಿಯಿಲ್ಲದ ಹಾಗೂ ಚುನಾವಣಾ ಲಾಭಗಳನ್ನು ಪಡೆಯಲು ಸಾಧ್ಯವಾಗದ ಪ್ರದೇಶಗಳಲ್ಲಿ ತನ್ನ ಪ್ರಾಬಲ್ಯವನ್ನು ಬೆಳೆಸಲು ಬಿಜೆಪಿ ಬಯಸುತ್ತಿದ್ದು, ಈ ಹಿನ್ನೆಲೆಯಲ್ಲಿ ಮೋದಿಯವರ ಈ ಹೇಳಿಕೆ ಹೆಚ್ಚಿನ ಮಹತ್ವವನ್ನು ಪಡೆದಿದೆ.
ಹಿಂದೂಗಳಲ್ಲದೆ ಇತರ ಸಮುದಾಯಗಳ ಬಳಿಗೂ ತಲುಪುವಂತೆ ಹಾಗೂ ಅವರ ಹೃದಯಗಳನ್ನು ಗೆಲ್ಲುವಂತೆಯೂ ಮೋದಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿಗಳನ್ನು ಆಗ್ರಹಿಸಿದ್ದಾರೆ. ಚುನಾವಣೆಯಲ್ಲಿ ಗಣನೀಯವಾದ ಪ್ರಗತಿಯನ್ನು ಸಾಧಿಸಲು ಪಕ್ಷವು ವಿಫಲವಾಗಿರುವ ರಾಜ್ಯವಾದ ಕೇರಳದಲ್ಲಿ ಅಲ್ಪಸಂಖ್ಯಾತ ಕ್ರೈಸ್ತ ಸಮುದಾಯವನ್ನು ತನ್ನೆಡೆಗೆ ಸೆಳೆದುಕೊಳ್ಳಲು ಬಿಜೆಪಿ ಯತ್ನಿಸಬೇಕೆಂದು ಮೋದಿ ಸಮಾವೇಶದಲ್ಲಿ ಸೂಚನೆ ನೀಡಿದ್ದಾರೆನ್ನಲಾಗಿದೆ.
ಸಮಾವೇಶದಲ್ಲಿ ಪ್ರಧಾನಿಯವರು ಈಶಾನ್ಯ ಭಾರತದ ಅಭಿವೃದ್ಧಿಯ ಕುರಿತೂ ಹಲವಾರು ಸಲಹೆ ಸೂಚನೆಗಳನ್ನು ನೀಡಿದ್ದಾರೆಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ತಿಳಿಸಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಅಧ್ಯಕ್ಷೀಯ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಸರಳತೆ ಹಾಗೂ ಬಡತನದ ಹಿನ್ನೆಲೆಯ ಬಗ್ಗೆಯೂ ಬಿಜೆಪಿ ಕಾರ್ಯಕರ್ತರು ಜನತೆಗೆ ಸಂದೇಶವನ್ನು ತಲುಪಿಸಬೇಕೆಂದು ಮೋದಿ ಕರೆ ನೀಡಿದರೆಂದು ಅವರು ಹೇಳಿದರು.