ನವದೆಹಲಿ: ಜಾಗತಿಕ ಆರ್ಥಿಕ ಕುಸಿತದ ಪರಿಣಾಮ ಅತಿ ದೊಡ್ಡ ಟೆಕ್ ಸಂಸ್ಥೆಯಾಗಿರುವ ಸತ್ಯ ನಾದೆಳ್ಲ ನೇತೃತ್ವದ ಮೈಕ್ರೋಸಾಫ್ಟ್ ಉದ್ಯೋಗಳಿಗೆ ಕತ್ತರಿ ಹಾಕಲು ಮುಂದಾಗಿದೆ. ಮರುಜೋಡಣೆಯ ಭಾಗವಾಗಿ ಉದ್ಯೋಗಕ್ಕೆ ಕತ್ತರಿ ಹಾಕಲಾಗುತ್ತಿರುವ ಮೊದಲ ಟೆಕ್ ದೈತ್ಯ ಸಂಸ್ಥೆಯಾಗಿದೆ.
ಮೈಕ್ರೋಸಾಫ್ಟ್ ನ ಕಚೇರಿ ಹಾಗೂ ಉತ್ಪನ್ನ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ 1,80,000 ನೌಕರರ ಪೈಕಿ ಶೇ.1 ರಷ್ಟು ಮಂದಿಗೆ ಈ ಉದ್ಯೋಗ ಕತ್ತರಿ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇತರ ಎಲ್ಲಾ ಸಂಸ್ಥೆಗಳಂತೆ ಇಂದು ನಾವು ಸಣ್ಣ ಪ್ರಮಾಣದಲ್ಲಿ ಉದ್ಯೋಗಗಳನ್ನು ಕಡಿತಗೊಳಿಸಿದ್ದೇವೆ. ನಾವು ನಮ್ಮ ಉದ್ಯಮ ಆದ್ಯತೆಗಳನ್ನು ಕಾಲ ಕಾಲಕ್ಕೆ ಮೌಲ್ಯಮಾಪನ ಮಾಡುತ್ತಿದ್ದು, ಅದಕ್ಕೆ ತಕ್ಕಂತೆ ರಚನೆಯ ಹೊಂದಾಣಿಕೆಗಳನ್ನು ಮಾಡುತ್ತಿರುತ್ತೇವೆ ಎಂದು ಬ್ಲೂಮ್ ಬರ್ಗ್ ಗೆ ಮೈಕ್ರೋಸಾಫ್ಟ್ ಹೇಳಿದೆ.
ಮೈಕ್ರೋಸಾಫ್ಟ್ ಸಂಸ್ಥೆ ತನ್ನ ವಿಂಡೋಸ್, ಟೀಮ್ಸ್ ಹಾಗೂ ಆಫೀಸ್ ಗ್ರೂಪ್ಸ್ ವಿಭಾಗದಲ್ಲಿ ನೇಮಕಾತಿಯನ್ನು ಕಡಿಮೆಗೊಳಿಸಿತ್ತು. ಮೂರನೇ ತ್ರೈಮಾಸಿಕದಲ್ಲಿ ಕ್ಲೌಡ್ ಆದಾಯದಲ್ಲಿ ಶೇ.26 ರಷ್ಟು ಏರಿಕೆಯ ಮೂಲಕ ಸದೃಢ ಲಾಭ ಗಳಿಸಿ ಒಟ್ಟಾರೆ 49.4 ಬಿಲಿಯನ್ ಡಾಲರ್ ನಷ್ಟು ಲಾಭ ಗಳಿಸಿತ್ತು.
ಕಳೆದ ತಿಂಗಳು ಸಂಸ್ಥೆಯ ಕ್ಯೂ4 ಆದಾಯವನ್ನು ಹಾಗೂ ಅರ್ನಿಂಗ್ಸ್ ಗೈಡೆನ್ಸ್ ಕೆಳಮುಖವಾಗಿತ್ತು. ಈ ನಡುವೆ ಟ್ವಿಟರ್ ನೇಮಕಾತಿ ತಂಡದಲ್ಲಿ ಶೇ.30 ರಷ್ಟು ಕಡಿತಗೊಳಿಸಿದ್ದು, ಎಲಾನ್ ಮಸ್ಕ್ ನೇತೃತ್ವದ ಟೆಸ್ಲಾ ನೂರಾರು ಉದ್ಯೋಗಿಗಳನ್ನು ಉದ್ಯೋಗದಿಂದ ತೆಗೆದುಹಾಕುತ್ತಿದೆ.
ಉಬರ್, ಸ್ನ್ಯಾಪ್, ಎನ್ವಿಡಿಯಾ, ಸ್ಪಾಟಿಫೈ, ಇಂಟೆಲ್ ಹಾಗೂ ಸೇಲ್ಸ್ ಫೋರ್ಸ್ ಸೇರಿದಂತೆ ಅನೇಕ ಸಂಸ್ಥೆಗಳು ನೇಮಕಾತಿಯನ್ನು ನಿಧಾನಗೊಳಿಸಿದೆ. ಕ್ಲೌಡ್ ಪ್ರಮುಖ ಸಂಸ್ಥೆ ಒರಾಕಲ್ ಸಹ ಸಾವಿರಾರು ನೌಕರರನ್ನು ಉದ್ಯೋಗದಿಂದ ತೆಗೆದುಹಾಕುವ ಮೂಲಕ 1 ಬಿಲಿಯನ್ ಡಾಲರ್ ನಷ್ಟು ಉಳಿತಾಯಕ್ಕೆ ಮುಂದಾಗಿದೆ.