ನವದೆಹಲಿ: ಕಳೆದೆರಡು ವರ್ಷಗಳಿಂದ ಕರೊನಾ ಕಾರಣದಿಂದಾಗಿ ಐಟಿ ಕ್ಷೇತ್ರದಲ್ಲೂ ಸಹ ಭಾರೀ ಬದಲಾವಣೆಯಾಗಿತ್ತು.ಹಲವು ಕಂಪನಿಗಳು ಮನೆಯಲ್ಲಿದ್ದುಕೊಂಡೇ ನೌಕರರಿಗೆ ಕೆಲಸ ಮಾಡುವ ಅವಕಾಶ ನೀಡಲಾಗಿತ್ತು.ದೇಶದ ಐಟಿ ದಿಗ್ಗಜ ಎನಿಸಿಕೊಂಡಿರುವ ಟಿಸಿಎಸ್ ಕೂಡ ಶೀಘ್ರದಲ್ಲೇ ವರ್ಕ್ ಫ್ರಂ ಹೋಂ ಬಿಟ್ಟು ಕಚೇರಿಗೆ ಬಂದು ಕೆಲಸ ಮಾಡಿ ಎಂದು ತನ್ನ ನೌಕರರಿಗೆ ಸೂಚನೆ ನೀಡಲಿದೆ.
ಈ ಬಗ್ಗೆ ಮಾತನಾಡಿರುವ ಸಿಇಒ ಗೋಪಿನಾಥನ್, ಸದ್ಯದಲ್ಲೇ ಎಲ್ಲರೂ ಕಚೇರಿಗೇ ಬಂದು ಕೆಲಸ ಮಾಡಬೇಕಿದೆ. ಈ ಬಗ್ಗೆ ಉದ್ಯೋಗಿಗಳಿಗೆ ಮಾಹಿತಿ ನೀಡಲಾಗುವುದು. ಹಂತ ಹಂತವಾಗಿ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದ್ದು, ಶೀಘ್ರದಲ್ಲೇ ಕಾರ್ಯಗತಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಸಂಸ್ಥೆಯಲ್ಲಿರುವ ಒಟ್ಟು 6 ಲಕ್ಷ ಉದ್ಯೋಗಿಗಳಲ್ಲಿ ಶೇ.20ರಷ್ಟು ಮಂದಿ ಕಚೇರಿಗೆ ಬರುತ್ತಿದ್ದಾರೆ. ಮೊದಲ ಹಂತವಾಗಿ 50,000 ಉದ್ಯೋಗಿಗಳನ್ನು ಕಚೇರಿಗೆ ಬಂದು ಕೆಲಸ ಮಾಡುವಂತೆ ಸೂಚಿಸಲಾಗುವುದು. ಈ ಬಗ್ಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಹೇಳಿದ್ದಾರೆ.
ಇದೇ ತಿಂಗಳಿನಿಂದ ಉನ್ನತ ಉದ್ಯೋಗಿಗಳು ವಾರಕ್ಕೆ ಮೂರು ದಿನ ಕಚೇರಿಗೆ ಆಗಮಿಸುತ್ತಾರೆ. ತದನಂತರ ಇತರೆ ಉದ್ಯೋಗಿಗಳಿಗೂ ಕಚೇರಿಗೆ ಬಂದು ಕೆಲಸ ಮಾಡುವಂತೆ ಸೂಚಿಸಲಾಗುವುದು. ಇದು ವಾರದಲ್ಲಿ ಮೂರು ದಿನಗಳಷ್ಟೇ ಅನ್ವಯವಾಗಲಿದೆ. ನಂತರ ನಿರಂತರವಾಗಿ ಎಲ್ಲಾ ಉದ್ಯೋಗಿಗಳಿಗೂ ಕಚೇರಿಗೆ ಬರಲು ಆದೇಶಿಸಲಾಗುವುದು ಎಂದಿದ್ದಾರೆ.