ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತರ ಆರ್ಥಿಕ ನೆರವಿನ ಅರ್ಜಿಗಳ ಕುರಿತು ಕ್ರಮ ಕೈಗೊಳ್ಳಲು ಭಾನುವಾರವೂ ಜಿಲ್ಲಾಧಿಕಾರಿ ಕಚೇರಿ ತೆರೆದು ಕಾರ್ಯಾಚರಿಸಿತು. ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳಲ್ಲಿ ಹಾಗೂ ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತ ಪ್ರದೇಶದ ಗ್ರಾಮಾಧಿಕಾರಿ ಕಚೇರಿಗಳಲ್ಲೂ ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದರು. ಎಂಡೋಸಲ್ಫಾನ್ ಸಂತ್ರಸ್ತರ ಆರ್ಥಿಕ ನೆರವಿಗಾಗಿ ಬಂದಿರುವ ಅರ್ಜಿಗಳ ಕುರಿತು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಹಾಜರಾಗಿ ಕಡತ ವಿಲೇವಾರಿ ಮಾಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯ ಎಂಡೋಸಲ್ಫಾನ್ ಸೆಲ್ ಎಂಡೋಸಲ್ಫಾನ್ ಸಂತ್ರಸ್ತರಿಗೆ ಬ್ಯಾಂಕ್ ಖಾತೆಗಳ ಮೂಲಕ ಆರ್ಥಿಕ ನೆರವು ವಿತರಿಸುವ ನಿಟ್ಟಿನಲ್ಲಿ ರಜಾದಿನವಾದ ಭಾನುವಾರವೂ ಕೆಲಸ ನಿರ್ವಹಿಸಲಾಯಿತು.
ಎಂಡೋಸಲ್ಫಾನ್ ಪೀಡಿತ 3308 ಜನರಿಗೆ ಜುಲೈ 2 ರವರೆಗೆ 149.56 ಕೋಟಿ ರೂ. ವಿತರಿಸಲಾಗಿದೆ. ಅರ್ಜಿ ಸಲ್ಲಿಸಿದ ಅರ್ಹ ಸಂತ್ರಸ್ತರಿಗೆಲ್ಲರಿಗೂ ಮೊತ್ತವನ್ನು ಶೀಘ್ರ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ತಿಳಿಸಿದ್ದಾರೆ. ಭೂಕಂದಾಯ ಜಂಟಿ ಆಯುಕ್ತ ಜೆರೊಮಿಕ್ ಜಾರ್ಜ್ ಅವರು ಎಂಡೋಸಲ್ಫಾನ್ ಸೆಲ್‍ಗೆ ಭೇಟಿ ನೀಡಿ ಇನ್ನೂ ಅರ್ಜಿ ಸಲ್ಲಿಸದ ಸಂತ್ರಸ್ತರ ಬಗ್ಗೆ ಮೌಲ್ಯಮಾಪನ ನಡೆಸಿದರು.
ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಂಡು, ಓ.ಪಿ ನಂಬರ್ ಲಭಿಸಿದ ಸಂತ್ರಸ್ತರು ಅಗತ್ಯ ದಾಖಲೆಗಳೊಂದಿಗೆ ಅಕ್ಷಯ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಬೇಕು. ಪಟ್ಟಿಯಲ್ಲಿ ಹೆಸರಿದ್ದ ವ್ಯಕ್ತಿಗಳು ಮೃತಪಟ್ಟಿದ್ದರೆ ಅವರ ವಾರಸುದಾರರು ಅಗತ್ಯ ದಾಖಲೆಗಳೊಂದಿಗೆ ಅಕ್ಷಯ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಯನ್ನು ಆಯಾ ಗ್ರಾಮ ಕಚೇರಿಗಳಿಂದ ಪಡೆಯಬಹುದಾಗಿದೆ.