ಕವರಟ್ಟಿ,: ಶಾಲಾಮಕ್ಕಳಿಗೆ ಮಧ್ಯಾಹ್ನದೂಟದಲ್ಲಿ ಮಾಂಸಾಹಾರವನ್ನು ನೀಡುವುದನ್ನು ಮುಂದುವರಿಸುವಂತೆ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸುವಂತೆ ಲಕ್ಷದ್ವೀಪ ಆಡಳಿತವು ಶಾಲಾ ಅಧಿಕಾರಿಗಳಿಗೆ ನಿರ್ದೇಶ ನೀಡಿದೆ.
ಮುಂದಿನ ಆದೇಶದವರೆಗೆ ಈ ಹಿಂದಿನಂತೆ ಲಕ್ಷದ್ವೀಪದಲ್ಲಿ ಶಾಲೆಗೆ ಹೋಗುವ ಮಕ್ಕಳಿಗೆ ಮಧ್ಯಾಹ್ನದೂಟದಲ್ಲಿ ಮಾಂಸ,ಚಿಕನ್,ಮೀನು ಮತ್ತು ಮೊಟ್ಟೆ ಸೇರಿದಂತೆ ಮಾಂಸಾಹಾರ ನೀಡುವುದನ್ನು ಮುಂದುವರಿಸಬೇಕು ಎಂದು ಶಿಕ್ಷಣ ನಿರ್ದೇಶನಾಲಯವು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
ಮಧ್ಯಾಹ್ನದೂಟದಲ್ಲಿ ಮಾಂಸಾಹಾರವನ್ನು ನಿಷೇಧಿಸುವ ಮತ್ತು ದ್ವೀಪಗಳಲ್ಲಿನ ಡೇರಿ ಫಾರ್ಮ್ಗಳನ್ನು ಮುಚ್ಚುವ ಲಕ್ಷದ್ವೀಪ ಆಡಳಿತದ ನಿರ್ಧಾರಗಳನ್ನು ಸ್ಥಳೀಯ ವಕೀಲ ಅಜ್ಮಲ್ ಅಹ್ಮದ್ ಅವರು ಕೇರಳ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಸೆಪ್ಟಂಬರ್ 2021ರಲ್ಲಿ ಉಚ್ಚ ನ್ಯಾಯಾಲಯವು ತನ್ನ ಅರ್ಜಿಯನ್ನು ತಿರಸ್ಕರಿಸಿದ ಬಳಿಕ ಅವರು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು. ಅವರ ಅರ್ಜಿಯನ್ನು ಪುರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯವು ಲಕ್ಷದ್ವೀಪದಲ್ಲಿ ಶಾಲಾ ಮಕ್ಕಳಿಗೆ ಮಧ್ಯಾಹ್ನದೂಟದಲ್ಲಿ ಮಾಂಸಾಹಾರವನ್ನು ಮುಂದುವರಿಸುವಂತೆ ಮೇ 2ರಂದು ಆದೇಶಿಸಿತ್ತು.