ಗುವಾಹಟಿ: ಬೀದಿ ನಾಟಕದ ವೇಳೆ ಶಿವನ ವೇಷ ಧರಿಸಿದ್ದ ವ್ಯಕ್ತಿಯನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಅಸ್ಸಾಂನಲ್ಲಿ ಬಂಧಿಸಲಾಗಿದೆ.
ನರೇಂದ್ರ ಮೋದಿ ಸರ್ಕಾರದಲ್ಲಿ ಬೆಲೆ ಏರಿಕೆಯ ವಿರುದ್ಧ ಪ್ರತಿಭಟಿಸಲು ನಿನ್ನೆ ಮಹಿಳೆಯೊಬ್ರು ಪಾರ್ವತಿಯ ವೇಷ ಧರಿಸಿದ್ರು. ಇವರೊಂದಿಗೆ ಬಿರಿಂಚಿ ಬೋರಾ ಎಂಬುವವರು ಭಗವಾನ್ ಶಿವನ ವೇಷವನ್ನು ಧರಿಸಿ ಬೀದಿ ನಾಟಕ ಪ್ರದರ್ಶಿಸಿದ್ರು. ಈ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು.
ಈ ಕೃತ್ಯವನ್ನು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದಂತಹ ಹಿಂದೂ ಗುಂಪುಗಳು ಟೀಕಿಸಿದವು. ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಿದ ಅವರು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಮತ್ತು ರಾಜಕೀಯ ಉದ್ದೇಶಗಳಿಗಾಗಿ ಧರ್ಮವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದರು. ದೂರಿನ ನಂತರ ಬಿರಿಂಚಿ ಬೋರಾನನ್ನು ಬಂಧಿಸಿ ನಾಗಾನ್ ಸದರ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.
ಬೀದಿ ನಾಟಕದಲ್ಲಿ ಬಿರಿಂಚಿ ಬೋರಾ ಮತ್ತು ಅವರ ಸಹ-ನಟಿ ಪರಿಶಿಮಿತಾ ಶಿವ ಮತ್ತು ಪಾರ್ವತಿಯ ವೇಷವನ್ನು ಧರಿಸಿ ರಸ್ತೆಯೊಂದರಲ್ಲಿ ಬೀದಿ ನಾಟಕ ಪ್ರದರ್ಶನಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಈ ವೇಳೆ ಗೊತ್ತುಪಡಿಸಿದ ಸ್ಥಳದಲ್ಲಿ ವಾಹನದಲ್ಲಿ ಇಂಧನ ಖಾಲಿಯಾಗಿ ವಾಹನ ನಿಂತುಹೋಗುತ್ತದೆ. ಈ ವೇಳೆ ಶಿವ – ಪಾರ್ವತಿ ನಡುವೆ ವಾದ ನಡೆದು ಏರುತ್ತಿರುವ ಇಂಧನ ಬೆಲೆಗಳು ಮತ್ತು ಇತರ ವಿಷಯಗಳ ಬಗ್ಗೆ ಮೋದಿ ಸರ್ಕಾರದ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತಾರೆ.
ಬೆಲೆ ಏರಿಕೆಯಿಂದ ಮುಕ್ತಿ ಪಡೆಯಲು ನರೇಂದ್ರ ಮೋದಿ ಸರ್ಕಾರದ ವಿರುದ್ಧ ಸಾರ್ವಜನಿಕರು ಪ್ರತಿಭಟನೆಗೆ ಮುಂದಾಗಬೇಕು ಎಂದು ಮನವಿ ಮಾಡುತ್ತಾರೆ. ಈ ವಿಡಿಯೋ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು.
ಶಿವವೇಷಧಾರಿಯನ್ನ ಬಂಧಿಸಿ ನಂತರ ಬಾಂಡ್ ಮೇಲೆ ಬಿಡುಗಡೆ ಮಾಡಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.