ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಚಂಡ ಬಹುಮತದಿಂದ ಪುನರಾಯ್ಕೆಯಾದ ಕೆಲವೇ ತಿಂಗಳುಗಳಲ್ಲಿ ಭಿನ್ನಮತ ಸ್ಫೋಟಗೊಂಡಿದೆ. “ತಾನು ದಲಿತ ಎಂಬ ಕಾರಣದಿಂದ ತನ್ನನ್ನು ಸೈಡ್‌ಲೈನ್ ಮಾಡಲಾಗಿದೆ” ಎಂದು ಆರೋಪಿಸಿ ಉತ್ತರ ಪ್ರದೇಶದ ಸಚಿವರೊಬ್ಬರು ರಾಜೀನಾಮೆ ನೀಡಿದ್ದಾರೆ.
ಉತ್ತರ ಪ್ರದೇಶ ಸಚಿವ ದಿನೇಶ್ ಖತಿಕ್ ಅವರು ತಮ್ಮ ರಾಜೀನಾಮೆ ಪತ್ರವನ್ನು ನೇರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕಳುಹಿಸಿದ್ದಾರೆ. ಮತ್ತೊಬ್ಬ ಸಚಿವ ಜಿತಿನ್ ಪ್ರಸಾದ ಅವರು ಮುಖ್ಯಮಂತ್ರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದಾರೆ.
ಉತ್ತರ ಪ್ರದೇಶದ ಜಲಸಂಪನ್ಮೂಲ ಸಚಿವ ಖತಿಕ್ ಅವರು ತಮ್ಮ ಪತ್ರದಲ್ಲಿ ಸಚಿವರಾಗಿ 100 ದಿನಗಳಾದ್ರೂ ಯಾವುದೇ ಕೆಲಸವನ್ನು ನಿಯೋಜಿಸಿಲ್ಲ ಎಂದು ಹೇಳಿದ್ದಾರೆ. ಇಲಾಖಾ ವರ್ಗಾವಣೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ರಾಜೀನಾಮೆ ನೀಡಿದ್ದಾರೆ.
ನಾನು ದಲಿತ ಎಂಬ ಕಾರಣಕ್ಕೆ ನನಗೆ ಯಾವುದೇ ಪ್ರಾಮುಖ್ಯತೆ ನೀಡಿಲ್ಲ, ನನಗೆ ಸಚಿವನಾಗಿ ಯಾವುದೇ ಅಧಿಕಾರವಿಲ್ಲ. ನಾನು ರಾಜ್ಯ ಸಚಿವನಾಗಿ ಕೆಲಸ ಮಾಡುವುದು ದಲಿತ ಸಮುದಾಯಕ್ಕೆ ವ್ಯರ್ಥ. ನನ್ನನ್ನು ಯಾವುದೇ ಸಭೆಗೆ ಕರೆದಿಲ್ಲ ಮತ್ತು ನನ್ನ ಸಚಿವಾಲಯದ ಬಗ್ಗೆ ಏನನ್ನೂ ಹೇಳಿಲ್ಲ. ಇದು ದಲಿತ ಸಮುದಾಯಕ್ಕೆ ಮಾಡಿದ ಅವಮಾನ ಎಂದಿದ್ದಾರೆ. ರಾಜೀನಾಮೆ ಹಿಂಪಡೆಯುವಂತೆ ಅವರ ಮನವೊಲಿಸಲು ಪಕ್ಷ ಪ್ರಯತ್ನಿಸುತ್ತಿದೆ ಎಂದು ಮೂಲಗಳು ಹೇಳಿವೆ.
ಇನ್ನೂ ತಮ್ಮ ತಂಡದ ಅಧಿಕಾರಿಯೊಬ್ಬರನ್ನು ಮುಖ್ಯಮಂತ್ರಿ ಅಮಾನತು ಮಾಡಿರುವ ಬಗ್ಗೆ ಜಿತಿನ್ ಪ್ರಸಾದ ಅವರು ಕೋಪಗೊಂಡಿದ್ದಾರೆ. ಜಿತಿನ್ ಪ್ರಸಾದ ಕಳೆದ ವರ್ಷ ಯುಪಿ ಚುನಾವಣೆಗೆ ಕೆಲವೇ ತಿಂಗಳುಗಳ ಮುನ್ನ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರಿಕೊಂಡಿದ್ದರು.
ಜಿತಿನ್ ಪ್ರಸಾದ ಅವರಿಗೆ ಪ್ರಮುಖ ಲೋಕೋಪಯೋಗಿ ಇಲಾಖೆ (PWಆ) ಸಚಿವಾಲಯದ ಜವಾಬ್ದಾರಿ ನೀಡಲಾಗಿದೆ. ಆದರೆ ಇಲಾಖೆಯು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದೆ. ಮುಖ್ಯಮಂತ್ರಿ ಕಚೇರಿಯು ತನಿಖೆಗೆ ಆದೇಶಿಸಿದ್ದು, ಹಲವಾರು ಅಧಿಕಾರಿಗಳು ವರ್ಗಾವಣೆಗಾಗಿ ಲಂಚದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಮಂಗಳವಾರ, ಯುಪಿ ಸರ್ಕಾರವು ಇಲಾಖಾ ವರ್ಗಾವಣೆಯಲ್ಲಿ ಗಂಭೀರ ಅಕ್ರಮಗಳ ಮೇಲೆ ಐವರು ಹಿರಿಯ PWಆ ಅಧಿಕಾರಿಗಳನ್ನು ಅಮಾನತುಗೊಳಿಸಿದೆ.
ವಿಶೇಷ ಕರ್ತವ್ಯದಲ್ಲಿರುವ ಜಿತಿನ್ ಪ್ರಸಾದರ ಅಧಿಕಾರಿ, ಐಎಎಸ್ ಅಧಿಕಾರಿ ಅನಿಲ್ ಕುಮಾರ್ ಪಾಂಡೆಯವರನ್ನು ವರ್ಗಾವಣೆಗಾಗಿ ಲಂಚ ಪಡೆದ ಆರೋಪದ ಮೇಲೆ ಅಮಾನತು ಮಾಡಿ ವಿಜಿಲೆನ್ಸ್ ವಿಚಾರಣೆ ನಡೆಸಲಾಗ್ತಿದೆ. ಈ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ಗರಂ ಆಗಿದ್ದು, ಇಲಾಖೆಯಲ್ಲಿನ ಅಕ್ರಮದ ಬಗ್ಗೆ ಸಚಿವರನ್ನು ಕರೆಸಿ ತರಾಟೆಗೆ ತೆಗೆದುಕೊಂಡಿದ್ದರೆನ್ನಲಾಗಿದೆ. ಹೀಗಾಗಿ ಜಿತಿನ್ ಪ್ರಸಾದ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ದೂರಿದ್ದಾರೆ.