ಕಾಸರಗೋಡು: ಅಪರಿಚಿತ ವ್ಯಕ್ತಿಯೊಬ್ಬ ಎರಡು ಚೀಲಗಳೊಂದಿಗೆ ರಸ್ತೆಯಲ್ಲಿ ತೆರಳುತ್ತಿದ್ದು, ಒಂದರಲ್ಲಿ ಮಗು ಇತ್ತೆಂದೂ, ಈ ಚೀಲವನ್ನು ತುಂಬಿ ಹರಿಯುತ್ತಿದ್ದ ನದಿಗೆ ಎಸೆದಿರುವುದಾಗಿ ಕೇಳಿ ಬರುತ್ತಿದ್ದ ವದಂತಿ ಸಾರ್ವಜನಿಕರು ಹಾಗೂ ಪೊಲೀಸರನ್ನು ತಾಸುಗಳ ಕಾಲ ಆತಂಕಕ್ಕೆ ತಳ್ಳುವಂತೆ ಮಾಡಿತ್ತು.
ಕಾಸರಗೋಡು-ಕಾಞಂಗಾಡು ಕೆಎಸ್‍ಟಿಪಿ ರಸ್ತೆಯ ಚಾಮುಂಡಿಕುನ್ನು ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಎರಡು ಚೀಲದೊಂದಿಗೆ ನಡೆದುಹೋಗುತ್ತಿದ್ದು, ಒಂದರಲ್ಲಿ ಮಗುವಿನ ಕೈ ಕಾಣಿಸಿದೆ.ಈ ಚೀಲವನ್ನು ಹೊಳೆಗೆ ಎಸದಿರುವುದಾಗಿ ತಿಳಿಸಿದ್ದು, ಮಾಹಿತಿ ಕಾಞಂಗಾಡು ಡಿವೈಎಸ್‍ಪಿ ವರೆಗೂ ತಲುಪಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ನಡೆದುಹೋಗುತ್ತಿದ್ದ ವ್ಯಕ್ತಿಯನ್ನು ಕೊನೆಗೂ ಪತ್ತೆಹಚ್ಚಿದ್ದಾರೆ. ಆತನ ಕೈಯಲ್ಲಿದ್ದ ಗೋಣಿಚೀಲ ತಪಾಸಣೆ ನಡೆಸಿದಾಗ ಹಳೇ ಬಟ್ಟೆ ಸೇರಿದಂತೆ ವಿವಿಧ ವಸ್ತು ಪತ್ತೆಯಾಗಿದೆ. ಈ ವ್ಯಕ್ತಿ ಮಾನಸಿಕ ಅಸೌಖ್ಯ ಹೊಂದಿರುವುದನ್ನು ಪತ್ತೆಹಚ್ಚಿದ್ದರು. ಈತ ನಡೆದುಬಂದ ಹಾದಿಯುದ್ದಕ್ಕೂ ಇರುವ ಸಿಸಿ ಕ್ಯಾಮರಾ ತಪಾಸಣೆ ನಡೆಸಿದಾಗ, ಈತನಲ್ಲಿದ್ದುದು ಒಂದೇ ಬ್ಯಾಗ್ ಎಂದೂ ಖಚಿತಗೊಂಡಿತ್ತು. ನೆಮ್ಮದಿಯ ನಿಟ್ಟುಸಿರು ಬಿಟ್ಟ ಪೊಲೀಸರು ಹಾಗೂ ಸ್ಥಳೀಯ ನಿವಾಸಿಗಳು ಅಸೌಖ್ಯಪೀಡಿತ ವ್ಯಕ್ತಿಯನ್ನು ಅಂಬಲತ್ತರದ ಸ್ನೇಹಾಲಯಕ್ಕೆ ಸೇರ್ಪಡೆಗೊಳಿಸಿ ಮಾನವೀಯತೆ ಮೆರೆದರು. ವದಂತಿ ಹಬ್ಬಿದ ವ್ಯಕ್ತಿ ಅಲ್ಲಿಂದ ನಾಪತ್ತೆಯಾಗಿದ್ದನು.