ನವದೆಹಲಿ: 'ತಂದೆಯ ನಿಧನದ ನಂತರ ಮಗುವಿಗೆ ತಾಯಿಯೇ ಸಹಜ ರಕ್ಷಕಿ. ಹಾಗಾಗಿ ಮಗುವಿನ ಉಪನಾಮವನ್ನು (ಸರ್‌ನೇಮ್) ನಿರ್ಧರಿಸುವ ಹಕ್ಕು ತಾಯಿಗೆ ಇದೆ' ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ನ್ಯಾಯಮೂರ್ತಿಗಳಾದ ದಿನೇಶ್ ಮಾಹೇಶ್ವರಿ ಮತ್ತು ಕೃಷ್ಣ ಮುರಾರಿ ಅವರಿದ್ದ ಪೀಠವು ಆಂಧ್ರ ಪ್ರದೇಶ ಹೈಕೋರ್ಟ್ ನೀಡಿದ್ದ ತೀರ್ಪೊಂದನ್ನು ವಜಾಗೊಳಿಸಿದೆ.
ಮಹಿಳೆಯೊಬ್ಬರು ಎರಡನೇ ಗಂಡನ ಹೆಸರನ್ನು ತಮ್ಮ ಮಗುವಿನ ಮಲತಂದೆ ಎಂದು ದಾಖಲೆಗಳಲ್ಲಿ ಉಲ್ಲೇಖಿಸಬೇಕು ಎಂದು ಆಂಧ್ರ ಪ್ರದೇಶ ಹೈಕೋರ್ಟ್ ತೀರ್ಪು ನೀಡಿತ್ತು.
'ಮಹಿಳೆಯ ಎರಡನೇ ಪತಿಯ ಹೆಸರನ್ನು ಮಗುವಿನ ದಾಖಲೆಯಲ್ಲಿ ಸೇರಿಸುವಂತೆ ಹೈಕೋರ್ಟ್ ನೀಡಿರುವ ನಿರ್ದೇಶನ, ಅತ್ಯಂತ ಕ್ರೂರ ಮತ್ತು ಅರ್ಥಹೀನ. ಇದು ಮಗುವಿನ ಮಾನಸಿಕ ಆರೋಗ್ಯ ಮತ್ತು ಆತ್ಮಗೌರವದ ಮೇಲೆ ಪರಿಣಾಮ ಬೀರುತ್ತದೆ' ಎಂದು ಪೀಠ ಹೇಳಿದೆ.