ಕಾಸರಗೋಡು: ಜೈ ತುಳುನಾಡು (ರಿ)ಸಂಸ್ಥೆ ತುಳು ಭಾಷೆಯ ಸಂಸ್ಕøತಿ ಮತ್ತು ಸಂಪ್ರದಾಯ ಉಳಿವಿಗಾಗಿ ಶ್ರಮಿಸುತ್ತಿರುವ ಸಂಘಟನೆಯಾಗಿದೆ ಎಂದು ಜೈ ತುಳುನಾಡ್(ರಿ)ಕೇಂದ್ರ ಸಮಿತಿ ಉಪಾಧ್ಯಕ್ಷ ಹರಿಕಾಂತ್ ಕಾಸರಗೋಡು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
'ಗೇನಸಿರಿ'ಎಂಬ ಲಿಪ್ಯಂತರ ತಂತ್ರಾಂಶದ ಬಗ್ಗೆ ಮಾಹಿತಿ ನೀಡಿದರು. ಗೇನಸಿರಿ ತಂತ್ರಾಂಶವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಂಗೀಕರಿಸಿದ್ದು, ಯುನಿಕೋಡಿಗೆ ಕಳುಹಿಸಲಾದ ತುಳು ಲಿಪಿಯಲ್ಲಿ ತಯಾರಿಸಲಾಗಿದೆ. ಇದರಲ್ಲಿ ತುಳು ಲಿಪಿಯ ವಿಶೇಷ ಅಕ್ಷರಗಳನ್ನೂ ಬಳಸಬಹುದಾಗಿದೆ. ತುಳು ಭಾಷೆ ಸಂಸ್ಕøತಿ ಅಚಾರ ವಿಚಾರಗಳ ಉಳಿವಿನ ಬಗ್ಗೆ ಶ್ರಮಿಸುತ್ತಿರುವ ಜೈ ತುಳುನಾಡ್ (ರಿ.) ಸಂಘಟನೆ ವತಿಯಿಂದ ತಯಾರಿಸಲಾದ 'ಗೇನಸಿರಿ'ಎಂಬ ಲಿಪ್ಯಂತರ ತಂತ್ರಾಂಶವನ್ನು ಕಾಸರಗೋಡು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‍ಚಂದ್ ಈಗಾಗಲೇ ಬಿಡುಗಡೆಗೊಳಿಸಿದ್ದಾರೆ. ಈ ತಂತ್ರಾಂಶವನ್ನು ಜೈ ತುಳುನಾಡ್ (ರಿ.) ಸಂಘಟನೆಯ ಸದಸ್ಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ಜ್ಞಾನೇಶ್ ದೇರಳಕಟ್ಟೆ ಇವರು ತಯಾರಿಸಿದ್ದಾರೆ. ತಂತ್ರಾಂಶದ ಸಹಾಯದಿಂದ ತುಳು ಲಿಪಿಯಲ್ಲಿ ಪುಸ್ತಕ, ಪತ್ರಿಕೆ, ಆಮಂತ್ರಣ ಪತ್ರಿಕೆ ಮುದ್ರಿಸಲು, ಫ್ಲೆಕ್ಸ್ ಬ್ಯಾನರ್ ತಯಾರಿಸಲು, ಡಿಜಿಟಲ್ ಮಾಧ್ಯಮದಲ್ಲಿ ತುಲು ಲಿಪಿಯನ್ನು ಬಳಸಲು, ಶೈಕ್ಷಣಿಕವಾಗಿ ತುಳು ಲಿಪಿಯನ್ನು ಬಳಸಲು ಸಹಾಯ ಮಾಡಲಿದೆ.
ಈ ತಂತ್ರಾಂಶದ ಸಹಾಯದಿಂದ ಭಾರತದ ಅನೇಕ ಲಿಪಿಯಲ್ಲಿ ಬರೆಯುವ ಅಕ್ಷರಗಳನ್ನು ತುಲು ಲಿಪಿಗೆ ಸುಲಭವಾಗಿ ಬದಲಿಸಬಹುದು. ಮೊದಲ ಹಂತದಲ್ಲಿ ಈ ತಂತ್ರಾಂಶದಲ್ಲಿ ಕನ್ನಡ ಲಿಪಿಯಿಂದ ಮತ್ತು ಮಲಯಾಳಂ ಲಿಪಿಯಿಂದ ತುಳು ಲಿಪಿಗೆ ಬದಲಾಯಿಸಬಲ್ಲ ತಂತ್ರಾಂಶವನ್ನು ಅಳವಡಿಸಲಾಗಿದೆ. ಮುಂದಿನ ಹಂತದಲ್ಲಿ ಭಾರತದ ಇತರ ಲಿಪಿಗಳಿಂದ ತುಲು ಲಿಪಿಗೆ ಬದಲಾಯಿಸುವ ತಂತ್ರಾಂಶವನ್ನು ಅಳವಡಿಸಲಿದ್ದೇವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಕಾರ್ತಿಕ್ ಎನ್ ಪೆರ್ಲ, ಉಪಾಧ್ಯಕ್ಷ ವಿನೋದಾ ರೈ, ಕುಶಲಾಕ್ಷಿ ಪಿ.ಕುಲಾಲ್, ಉತ್ತಮ, ಜ್ಞಾನೇಶ್ ದೇರಳಕಟ್ಟೆ ಉಪಸ್ಥಿತರಿದ್ದರು.