ಕಾಸರಗೋಡು: ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಅಗ್ನಿಶಾಮಕ ದಳ ನೇತೃತ್ವದಲ್ಲಿ ಜಿಲ್ಲೆಯಲ್ಲಿ ನೀರಲ್ಲಿ ಮುಳುಗಿ ಸಾವು ತಡೆ ದಿನಾಚರಣೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ಬದಿಯಡ್ಕ ಪಂಚಾಯಿತಿಯ ನೀರ್ಚಾಲ್‍ನಲ್ಲಿ ಸೋಮವಾರ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಜಿಲ್ಲಾ ಮಟ್ಟದ ಉದ್ಘಾಟನೆ ನೆರವೇರಿಸಿದರು.
ಜಿಲ್ಲೆಯಲ್ಲಿ 2020 ಮತ್ತು 2021ರಲ್ಲಿ ನೀರಲ್ಲಿ ಮುಳುಗಿ ಯಥಾಪ್ರಕಾರ ಶೇ. 78 ಮತ್ತು 70 ಮಂದಿ ಸಾವನ್ನಪ್ಪಿದ್ದಾರೆ. ಈ ವರ್ಷ ಜೂನ್ 30ರವರೆಗೆ 31 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಜಲಮೂಲಗಳಿಂದ ಸಮೃದ್ಧವಾಗಿರುವ ನಮ್ಮ ಜಿಲ್ಲೆಯಲ್ಲಿ ಮುಳುಗಡೆ ಸಾವು ತಪ್ಪಿಸುವ ಜಾಗೃತಿ ಅಭಿಯಾನ ಪ್ರತಿಯೊಬ್ಬರಿಗೂ ತಲುಪಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲಾ ಅಗ್ನಿಶಾಮಕದಳ ಅಧಿಕಾರಿ ಎ.ಟಿ.ಹರಿದಾಸನ್ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ. ಶಾಂತಾ ಮುಖ್ಯ ಅತಿಥಿಗಳಾಗಿದ್ದರು.
ಪಂಚಾಯಿತಿ ಉಪಾಧ್ಯಕ್ಷ ಎಂ. ಅಬ್ಬಾಸ್, ಗ್ರಾಪಂ ಸದಸ್ಯರಾದ ಕೆ.ಪಿ.ಸ್ವಪ್ನ, ಹಮೀದ್ ಪಳ್ಳತ್ತಡ್ಕ, ಡಿ.ಶಂಕರ, ಕಾಸರಗೋಡು ಅಗ್ನಿಶಾಮಕ ದಳ ಠಾಣಾಧಿಕಾರಿ ಪ್ರಕಾಶ್ ಕುಮಾರ್, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಪಾಯ ವಿಶ್ಲೇಷಕ ಪ್ರೇಮ್‍ಜಿ ಪ್ರಕಾಶ್, ಎಂ.ಎಚ್.ಜನಾರ್ದನ, ಜಯದೇವ ಖಂಡಿಕೆ, ನಾಗರಿಕ ರಕ್ಷಣಾ ಸಿಬ್ಬಂದಿ ಮೊದಲಾದವರಿದ್ದರು. ಈ ಸಂದರ್ಭ ಸೀತಾಂಗೋಳಿ ಮಲಿಕ್‍ದೀನಾರ್ ಪದವಿ ಅಧ್ಯಯನ ಕಾಲೇಜಿನ ಎನ್ನೆಸ್ಸೆಸ್ ಸ್ವಯಂಸೇವಕರು ಮತ್ತು ಪೆರಡಾಲ ಎಂಎಸ್‍ಸಿಎಚ್‍ಎಸ್ ಶಾಲೆಯ ವಿದ್ಯಾರ್ಥಿಗಳು ಜಲ ಅಪಘಾತ ರಕ್ಷಣಾ ಕಾರ್ಯಾಚರಣೆಗೆ ತರಬೇತಿಯನ್ನೂ ನೀಡಲಾಯಿತು. 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು.
ನೀರಲ್ಲಿ ಮುಳುಗಿ ಸಾವು ತಡೆ ಅಭಿಯಾನ: ನೀರ್ಚಾಲ್‍ನಲ್ಲಿ ಜಾಗೃತಿ ಕಾರ್ಯಕ್ರಮ
0
ಜುಲೈ 26, 2022
Tags