ನವದೆಹಲಿ :ಇತ್ತೀಚೆಗೆ ಅಮರನಾಥ್ ಯಾತ್ರೆ ಹಾದಿಯಲ್ಲಿ ಕನಿಷ್ಠ 16 ಮಂದಿಯನ್ನು ಬಲಿಪಡೆದುಕೊಂಡ ಮೇಘ ಸ್ಫೋಟ ಸಂಭವಿಸಿದ ಸ್ಥಳದಲ್ಲಿಯೇ ಕಳೆದ ವರ್ಷ ಕೂಡ ಹಠಾತ್ ಪ್ರವಾಹ ಪರಿಸ್ಥಿತಿ ಉಂಟಾಗಿತ್ತೆಂದು ತಿಳಿದು ಬಂದಿದ್ದು. ಇದು ಗೊತ್ತಿದ್ದೂ ಸಹ ಈ ವರ್ಷ ಕೂಡ ಇಲ್ಲಿಯೇ ಟೆಂಟುಗಳನ್ನು ಯಾತ್ರಾರ್ಥಿಗಳಿಗಾಗಿ ಅಳವಡಿಸಲಾಗಿತ್ತು ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಕಳೆದ ವರ್ಷದ ಜುಲೈ 28ರಂದು ಉಂಟಾದ ಪ್ರವಾಹ ಯಾವುದೇ ಸಾವುನೋವು ಉಂಟು ಮಾಡಿಲ್ಲ- ಕಾರಣ ಕೋವಿಡ್ ಸಾಂಕ್ರಾಮಿಕದಿಂದ ಯಾತ್ರೆ ಅನುಮತಿಸಲಾಗಿರಲಿಲ್ಲ. ಆದರೆ ಭದ್ರತಾ ಸಿಬ್ಬಂದಿಗಳ ಕೆಲ ಟೆಂಟುಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದವು. ಆದರೆ ಇಲ್ಲಿ ಉಂಟಾದ ಪ್ರವಾಹ ಕುರಿತು ಉನ್ನತ ಮಟ್ಟದಲ್ಲೂ ಮಾಹಿತಿ ನೀಡಲಾಗಿತ್ತು.
ಈ ವರ್ಷ ಹೆಚ್ಚು ಜನರಿಗೆ ವಸತಿ ಸೌಲಭ್ಯ ಒದಗಿಸಲೆಂದು ಫ್ಲಡ್ ಚಾನಲ್ ಅಥವಾ ಡ್ರೈ ರಿವರ್ ಬೆಡ್‍ನಲ್ಲೂ ಟೆಂಟ್ ಹಾಕಲಾಗಿತ್ತು ಹಾಗೂ ಇಲ್ಲೊಂದು ಲಂಗರ್ (ಪಾಕಶಾಲೆ) ಕೂಡ ಕಾರ್ಯಾಚರಿಸುತ್ತಿತ್ತು.
ಶ್ರೀ ಅಮರನಾಥಜಿ ದೇವಳ ಮಂಡಳಿಯು ಈ ವರ್ಷ ಹಠಾತ್ ಪ್ರವಾಹ ತಪ್ಪಿಸಲು ಎರಡು ಅಡಿ ಅಗಲದ ಕಲ್ಲಿನ ಗೋಡೆ ನಿರ್ಮಿಸಿದ್ದರೂ ಅದನ್ನೂ ದಾಟಿ ನೀರು ಕೆಲವೇ ಕ್ಷಣಗಳಲ್ಲಿ ಹರಿದು ಹೋಗಿತ್ತು.