ಕುಂಬಳೆ: ಕರ್ಕಾಟಕ ಮಾಸದಲ್ಲಿ ಜನಮಾನಸದಲ್ಲಿ ಸತತ ರಾಮಧ್ಯಾನ ಮೊಳಗಿಸುವ ಸದಾಶಯದೊಂದಿಗೆ ಕುಂಬಳೆ ಕೃಷ್ಣನಗರದಲ್ಲಿ ಶ್ರೀರಾಮ ಕಥಾ ಸತ್ಸಂಗ ಮತ್ತು ಶ್ರೀರಾಮ ನಾಮ ಜಪ ಧ್ಯಾನ ಸಪ್ತಾಹಕ್ಕೆ ನಾಂದಿಯಾಯಿತು. ಕೃಷ್ಣನಗರದ ಶ್ರೀರಾಮಕಥಾ ಸತ್ಸಂಗ ಸಮಿತಿಯ ನೇತ್ರೃತ್ವದಲ್ಲಿ ನಡೆಯುವ ಸಪ್ತಾಹವನ್ನು ಉದ್ಯಮಿ ರಘುನಾಥ ಪೈ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಪ್ರಧಾನ ಭಾಷಣ ಮಾಡಿದ ಲೇಖಕ, ಪತ್ರಕರ್ತ ಎಂ. ನಾ. ಚಂಬಲ್ತಿಮಾರ್ " ಶ್ರೀರಾಮನ ಬದುಕು ಆದರ್ಶದ ದೀವಟಿಗೆ. ಒಬ್ಬ ಸತ್ಪ್ರಜೆ, ಸಜ್ಜನ ನಾಗರಿಕ ಹೇಗಿರಬೇಕೆಂದರೆ ರಾಮನಂತಿರಬೇಕು. ರಾಮನ ಬದುಕೇ ಆದರ್ಶಕ್ಕೆ ಪ್ರೇರಣೆ. ರಾಮನ ಗುಣಗಳನ್ನು ಜೀವನದಲ್ಲಿ ಅಳವಡಿಸಿದರೆ ಮಾನವತೆಯಿಂದ ಮಾಧವತ್ವಕ್ಕೇರಬಹುದು"ಎಂದರು.
ಜ್ಯೋತಿಷಿ ಸಜೇಶ್ ಪೆÇದುವಾಳ್, ಡಾ. ಕಿಶೋರ್ ಕುಮಾರ್, ನ್ಯಾಯವಾದಿ ಸದಾನಂದ ಕಾಮತ್ ಅತಿಥಿಗಳಾಗಿ ಪಾಲ್ಗೊಂಡರು. ಸಂಘಟನಾ ಸಮಿತಿ ಉಪಾಧ್ಯಕ್ಷ ಲೋಕೇಶ್ ಆಚಾರ್ಯ ಸ್ವಾಗತಿಸಿದರು. ಅಧ್ಯಕ್ಷ ನಾಗೇಶ್ ಕಾರ್ಲೆ ವಂದಿಸಿದರು. ಕಾರ್ಯದರ್ಶಿ ಶಿವಾನಂದರಾವ್ ನಿರೂಪಿಸಿದರು. ಬಳಿಕ ಕುಂಬಳೆ ವೀರವಿಠಲ ಮಹಿಳಾ ಭಜನಾ ಮಂಡಳಿಯವರಿಂದ ಭಜನೆ ಜರುಗಿತು. ಅನಂತರ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಅವರಿಂದ ಒಂದು ವಾರಗಳ ಪಯರ್ಂತ ನಡೆಯುವ ಶ್ರೀರಾಮ ಕಥಾ ಸತ್ಸಂಗಕ್ಕೆ ಚಾಲನೆಯಾಯಿತು.