ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಭೀಕರ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ 5 ಗಂಟೆಗಳಲ್ಲೇ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಆರೋಪಿಗಳಾದ ಮಹಾಂತೇಶ್ ಶಿರೂರ ಮತ್ತು ಮಂಜುನಾಥ ದುಮ್ಮವಾಡನನ್ನು ಬಂಧಿಸಿದ್ದಾರೆ. ಆರೋಪಿಗಳು ಕಾರಿನಲ್ಲಿ ಪರಾರಿಯಾಗುತ್ತಿದ್ದಾರೆ ಎಂಬ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು.
ರಸ್ತೆ ಮಧ್ಯೆ ಜೆಸಿಬಿಯಿಂದ ಆರೋಪಿಗಳಿದ್ದ ಕಾರನ್ನು ಅಡ್ಡಗಟ್ಟಿದ ಪೊಲೀಸರು ಆರೋಪಿಗಳು ಪ್ರತಿದಾಳಿ ನಡೆಸಬಹುದು ಎಂಬ ಮುನ್ನೆಚ್ಚರಿಕೆಯಿಂದ ಗನ್ ಪಾಯಿಂಟ್ ನಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಬ್ಬರು ಚಂದ್ರಶೇಖರ ಗುರೂಜಿ ಅವರಿಗೆ ಆಪ್ತರಾಗಿದ್ದು ಸರಳವಾಸ್ತು ಸಂಸ್ಥೆಯಲ್ಲಿ ಗುರೂಜಿ ಜೊತೆ ಕೆಲಸ ಮಾಡಿದ್ದರು ಎಂಬ ವಿಷಯಗಳನ್ನು ಪೊಲೀಸರು ಕಲೆ ಹಾಕಿದ್ದಾರೆ..