ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ.ಡಿ) ಎರಡನೇ ಸುತ್ತಿನ ವಿಚಾರಣೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಜರಾಗಿದ್ದಾರೆ.
ಸೋನಿಯಾ ಗಾಂಧಿ ಮಂಗಳವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಕೇಂದ್ರ ದೆಹಲಿಯ ಕೇಂದ್ರ ಭಾಗದಲ್ಲಿ ಇ.ಡಿ ಕಚೇರಿಗೆ ತೆರಳಿದ್ದರು.
ಸುಮಾರು ಆರು ಗಂಟೆಗಳ ಕಾಲ ಇ.ಡಿ ವಿಚಾರಣೆ ಎದುರಿಸಿದ್ದು, ಸೋನಿಯಾ ಹೇಳಿಕೆಯನ್ನು ಜಾರಿ ನಿರ್ದೇಶನಾಲಯ ದಾಖಲಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೋಜನ ನಿಮಿತ್ತ ಸೋನಿಯಾ ಮಧ್ಯಾಹ್ನ 2 ಗಂಟೆ ಸುಮಾರಿಗೆ ಇ.ಡಿ ಕಛೇರಿಯಿಂದ ಹೊರಟಿದ್ದರು. ಬಳಿಕ 3.30ಕ್ಕೆ ಮತ್ತೆ ಇ.ಡಿ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾಗಿದ್ದಾರೆ.
ನಾಳೆ (ಬುಧವಾರ) ಮತ್ತೆ ವಿಚಾರಣೆಗೆ ಹಾಜರಾಗುವಂತೆ ಇ.ಡಿ ಅಧಿಕಾರಿಗಳು ಸೋನಿಯಾ ಅವರಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಸುದ್ದಿಸಂಸ್ಥೆ 'ಎಎನ್‌ಐ' ಟ್ವೀಟ್ ಮಾಡಿದೆ.
ಸೋನಿಯಾ ಅವರು Z+ ಭದ್ರತೆಯಲ್ಲಿ ಅವರ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಬೆಳಿಗ್ಗೆ 11 ಗಂಟೆಗೆ ಇ.ಡಿ ಕಚೇರಿಗೆ ತಲುಪಿದ್ದರು.
ಪ್ರಿಯಾಂಕಾ ಗಾಂಧಿ ಇ.ಡಿ ಕಚೇರಿಯಲ್ಲಿಯೇ ಉಳಿದುಕೊಂಡಿದ್ದಾರೆ. ರಾಹುಲ್ ಗಾಂಧಿ ಶೀಘ್ರವೇ ಅಲ್ಲಿಂದ ತೆರಳಿದ್ದು, ಸೋನಿಯಾ ಗಾಂಧಿ ವಿಚಾರಣೆ ಖಂಡಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸದ್ಯ ಪೊಲೀಸರು ರಾಹುಲ್ ಸೇರಿದಂತೆ ಕಾಂಗ್ರೆಸ್ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.
ಪ್ರಿಯಾಂಕಾ ಗಾಂಧಿ ಅವರು ಇಡಿ ಕಚೇರಿಯಲ್ಲೇ ಉಳಿದಿದ್ದು, ಸೋನಿಯಾ ಅವರನ್ನು ಭೇಟಿಯಾಗಿ ಔಷಧಗಳು ಅಥವಾ ಅಗತ್ಯವಿದ್ದಲ್ಲಿ ವೈದ್ಯಕೀಯ ನೆರವು ನೀಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈ 11 ರಂದು ನಡೆದ ಎರಡು ಗಂಟೆಗಳ ಮೊದಲ ಸುತ್ತಿನ ವಿಚಾರಣೆ ವೇಳೆ ಇ.ಡಿ ಅಧಿಕಾರಿಗಳು 28 ಪ್ರಶ್ನೆಗಳನ್ನು ಸೋನಿಯಾ ಮುಂದಿಟ್ಟಿದ್ದರು ಎಂದು ತಿಳಿದು ಬಂದಿದೆ.
ನ್ಯಾಷನಲ್ ಹೆರಾಲ್ಡ್ ಒಡೆತನ ಹೊಂದಿರುವ ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್‌ನ ಹಣಕಾಸು ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ತಿಳಿದು ಬಂದಿದೆ.
ಗಾಂಧಿ ಕುಟುಂಬದ ವಿರುದ್ಧ ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದು, ಪ್ರತಿಭಟನೆ ಮುಂದುವರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಇ.ಡಿ ಕಚೇರಿಯಿಂದ ಸೋನಿಯಾ ಗಾಂಧಿಯವರ ನಿವಾಸದವರೆಗೂ ಸಿಆರ್‌ಪಿಎಫ್ ಮತ್ತು ಆರ್‌ಎಎಫ್ ಪಡೆಗಳನ್ನು ನಿಯೋಜಿಸಲಾಗಿದ್ದು, ಈ ಪ್ರದೇಶದಲ್ಲಿ ಸಂಚಾರ ನಿಷೇಧಿಸಲಾಗಿತ್ತು.