ನವದೆಹಲಿ: ದೇಶದಲ್ಲಿ ಮತ್ತೊಂದು ಪ್ರಯಾಣಿಕ ವಿಮಾನ ತುರ್ತು ಭೂಸ್ಪರ್ಶ ಮಾಡಿದ್ದು, ಗೋ ಏರ್ ಸಂಸ್ಥೆಯ ವಿಮಾನದ ಕಿಟಕಿ ಗಾಜು ಆಗಸದಲ್ಲೇ ಬಿರುಕು ಬಿಟ್ಟ ಪರಿಣಾಮ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದೆ ಎಂದು ತಿಳಿದುಬಂದಿದೆ.
ದೆಹಲಿ-ಗುವಾಹತಿ ನಡುವೆ ಸಂಚರಿಸುತ್ತಿದ್ದ ಗೋ ಏರ್ ಸಂಸ್ಥೆಯ ವಿಮಾನ ಸಂಖ್ಯೆ ಂ320ಟಿeo ವಿಮಾನದ ವಿಂಡ್‌ಶೀಲ್ಡ್ ಆಗಸದಲ್ಲಿರುವಾಗಲೇ ಬಿರುಕು ಬಿಟ್ಟಿದ್ದು, ಕೂಡಲೇ ಎಚ್ಚೆತ್ತ ಸಿಬ್ಬಂದಿ ವಿಮಾನವನ್ನು ಜೈಪುರಕ್ಕೆ ತಿರುಗಿಸಿ ತುರ್ತು ಭೂಸ್ಪರ್ಶ ಮಾಡಿದ್ದಾರೆ ಎಂದು ವಿಮಾನಯಾನ ನಿಯಂತ್ರಕ ಡಿಜಿಸಿಎ ಅಧಿಕಾರಿಗಳು ತಿಳಿಸಿದ್ದಾರೆ.
ಅಂತೆಯೇ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದು, ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎರಡು ದಿನಗಳಲ್ಲಿ ಗೋ ಏರ್ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಮೂರನೇ ಘಟನೆ ಇದಾಗಿದ್ದು, ಮಂಗಳವಾರ, ಗೋ ಏರ್ ನ ಮುಂಬೈ-ಲೇಹ್ ಮತ್ತು ಶ್ರೀನಗರ-ದೆಹಲಿ ವಿಮಾನಗಳು ತಾಂತ್ರಿಕ ದೋಷ ಎದುರಿಸಿದ್ದವು.