ಪಾಲಕ್ಕಾಡ್: ಮನುಷ್ಯನನ್ನು ಕೊಂದ ಒಂಟಿಸಲಗವನ್ನು ಹಿಡಿಯಲು ಅರಣ್ಯ ಇಲಾಖೆ ಅಪೂರ್ವ ಪ್ರಕರಣವೊಂದರಲ್ಲಿ ವಿಫಲವಾಗಿದೆ. ಸಮಸ್ಯೆ ಏನೆಂದರೆ, ಸಲಗವನ್ನು ನಿಯಂತ್ರಿಸಲು ಪಳಗಿಸಿದ ನಾಡಾನೆಯ ಮೂಲಕ ಪ್ರಯತ್ನಿಸಲಾಗಿತ್ತಾದರೂ, ಪ್ರಸ್ತುತ ಅವೆರಡೂ ಪರಸ್ಪರ ಗೆಳೆಯರಾಗಿರುವುದು ಅರಣ್ಯ ಇಲಾಖೆಯ ಯೋಜನೆಯನ್ನು ತಲೆಕೆಳಗಾಗಿಸಿದೆ ಪಾಲಕ್ಕಾಡ್ ನಲ್ಲಿ ಈ ಘಟನೆ ನಡೆದಿದೆ.
ಪಾಲಕ್ಕಾಡ್‍ನ ಓಡುವಂಗಾಡ್ ರಬ್ಬರ್ ಎಸ್ಟೇಟ್‍ನಲ್ಲಿ ಟ್ಯಾಪಿಂಗ್ ಮಾಡುತ್ತಿದ್ದಾಗ ಕಾಡಾನೆ ದಾಳಿಗೆ ಶಾಜಿ ಎಂಬ ರೈತ ಮೃತಪಟ್ಟ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿ ಆನೆಯನ್ನು ಹಿಡಿಯಲು ನಿರ್ಧರಿಸಿದ್ದರು. ಕಾಡಾನೆಯನ್ನು ಮಡುಹಲು ಕೋಟೂರು ಆನೆಧಾಮದಿಂದ ಅಗಸ್ತ್ಯ ಎಂಬ ಸಾಕಾನೆಯನ್ನು ಕಳುಹಿಸಲಾಗಿತ್ತು.
ಆದರೆ ಕಾಡಾನೆಯ ಬಳಿ ಬಂದಾಗ ಅಗಸ್ತ್ಯನ ಮನಸ್ಥಿತಿಯೇ ಬದಲಾಯಿತು. ಸಾಕಾನೆ ಕಾಡಾನೆಯ ಜೊತೆ ಸ್ನೇಹ ಬೆಳೆಸಿ ಅಚ್ಚರಿ ಮೂಡಿಸಿದ್ದಾನೆ.
ಈಗ ಕಾಡಾನೆ ಆಗಾಗ ಬಂದು ಅಗಸ್ತ್ಯನಿಗೆ ಅರಣ್ಯ ಇಲಾಖೆ ನೀಡುವ ಆಹಾರವನ್ನು ತಿನ್ನುತ್ತಿದೆ. ಕಾಡಾನೆ ಹಗಲು ರಾತ್ರಿ ಎನ್ನದೆ ಸಾಕಾನೆಯ ಜೊತೆಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದು ಅರಣ್ಯ ಇಲಾಖೆಯವರು ತಲೆಗೆ ಕೈಹೊತ್ತು ದಂತ(ಹಲ್ಲು)ಮುರಿದವರಂತೆ ಕೂತಿದ್ದಾರೆ.