ಬೆಂಗಳೂರು: ಕೇಂದ್ರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊರಡಿಸಿದ್ದ ಕೆಲವು 'ನಿರ್ಬಂಧಿಸುವ ಆದೇಶ'ಗಳನ್ನು ಪ್ರಶ್ನಿಸಿ ಟ್ವಿಟರ್ ಐಎನ್‌ಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಮಂಗಳವಾರ ಭಾರತ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಟ್ವಿಟರ್ ಸಲ್ಲಿಸಿದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್, ಟ್ವಿಟರ್ ಅನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲರಾದ ಮುಕುಲ್ ರೋಹಟಗಿ ಮತ್ತು ಅಶೋಕ್ ಹಾರ್ನಳ್ಳಿ ಅವರ ಕೋರಿಕೆಯ ಮೇರೆಗೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ ಮತ್ತು ವಿಚಾರಣೆಯನ್ನು ಆಗಸ್ಟ್ 25ಕ್ಕೆ ಮುಂದೂಡಿದ್ದಾರೆ.
ಮುಚ್ಚಿದ ಲಕೋಟೆಯಲ್ಲಿ ತಮ್ಮ ಮನವಿಯನ್ನು ಉಲ್ಲೇಖಿಸುವ ದಾಖಲೆಗಳನ್ನು ಸಲ್ಲಿಸಲು ಅರ್ಜಿದಾರರಿಗೆ ನ್ಯಾಯಾಲಯ ಅನುಮತಿ ನೀಡಿದೆ ಮತ್ತು ಅದನ್ನು ನ್ಯಾಯಾಲಯದ ಸುರಕ್ಷಿತ ಕಸ್ಟಡಿಯಲ್ಲಿ ಇಡಬೇಕು ಹಾಗೂ ಆ ದಾಖಲೆಗಳನ್ನು ಕೇಂದ್ರ ಸರ್ಕಾರದ ವಕೀಲರ ಸಮಿತಿಗೆ ಸಲ್ಲಿಸಲು ಅರ್ಜಿದಾರರಿಗೆ ಮುಕ್ತವಾಗಿರಬೇಕು ಎಂದು ಹೇಳಿದರು.
ಬ್ಲಾಕ್ ಮಾಡುವ ಆದೇಶಗಳು ಮತ್ತು ಅದನ್ನು ಜಾರಿಗೆ ತರುವುದು ಗೌಪ್ಯವಾಗಿರುತ್ತದೆ. ಯಾವುದೇ ಖಾತೆಯನ್ನು ಬ್ಲಾಕ್ ಮಾಡಬೇಕಾದರೆ ಅದಕ್ಕೆ ನಿರ್ದಿಷ್ಟ ಕಾರಣಗಳನ್ನು ನೀಡಬೇಕಾಗುತ್ತದೆ. ಏಕೆಂದರೆ ಟ್ವಿಟರ್, ಯಾವುದೇ ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸುವಾಗ ಬಳಕೆದಾರರಿಗೆ ಆ ಬಗ್ಗೆ ಸೂಕ್ತ ಕಾರಣ ನೀಡುತ್ತದೆ. ಆದರೆ, ಆಕ್ಷೇಪಾರ್ಹ ಟ್ವೀಟ್‌ಗಳನ್ನು ಬ್ಲಾಕ್ ಮಾಡುವಾಗ ಮಾತ್ರ ಯಾವುದೇ ಕಾರಣವನ್ನು ನೀಡಬೇಕಾಗಿರುವುದಿಲ್ಲ. ಹೀಗಿರುವಾಗ ಸಚಿವಾಲಯದ ಆದೇಶವನ್ನು ಯಥಾವತ್ತಾಗಿ ಪಾಲಿಸುವುದೇ ಆದರೆ, ನಮ್ಮ ಸಂಪೂರ್ಣ ವ್ಯವಹಾರವನ್ನೇ ಮುಚ್ಚಬೇಕಾಗುತ್ತದೆ ಎಂದು ಹಿರಿಯ ವಕೀಲ ಮುಕುಲ್ ರೋಹಟಗಿ ವಾದಿಸಿದರು.
2000ರ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎ ಅಡಿಯಲ್ಲಿ ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊರಡಿಸಿರುವ ಕೆಲವು ಬ್ಲಾಕಿಂಗ್ ಆದೇಶಗಳನ್ನು ಟ್ವಿಟರ್ ಪ್ರಶ್ನಿಸಿದೆ. ಬಳಿಕ ಜೂನ್ 27, 2022 ರಂದು ಮತ್ತೊಂದು ಸುತ್ತೋಲೆ ಹೊರಡಿಸಿದ್ದ ಸಚಿವಾಲಯವು, ಈ ಆದೇಶಗಳನ್ನು ಪಾಲಿಸುವಲ್ಲಿ ವಿಫಲವಾದರೆ, ಟ್ವಿಟರ್ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಮತ್ತು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಸೂಚಿಸಿತ್ತು. ಅಂದರೆ, IT ಕಾಯ್ದೆಯ ಸೆಕ್ಷನ್ 79(1) ಅಡಿಯಲ್ಲಿನ ರಕ್ಷಣೆಯನ್ನು ಹಿಂತೆಗೆದುಕೊಂಡಿತ್ತು.
ಸಚಿವಾಲಯ ಹೊರಡಿಸಿರುವ ನಿರ್ಬಂಧಿಸುವ ಆದೇಶಗಳನ್ನು ಟ್ವಿಟರ್ ಅನುಸರಿಸಿದೆ. ಆದರೆ, 11 ಖಾತೆಗಳಿಗೆ ಸಂಬಂಧಿಸಿದಂತೆ ಈ ನಿರ್ಬಂಧಿಸುವ ಆದೇಶಗಳಿಗೆ ಆಕ್ಷೇಪ ಸಲ್ಲಿಸಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಜುಲೈ 1, 2022 ರಂದು ಸಚಿವಾಲಯವು 10 ಟ್ವಿಟರ್ ಖಾತೆಗಳನ್ನು ನಿರ್ಬಂಧಿಸುವ ನಿರ್ದೇಶನವನ್ನು ಹಿಂತೆಗೆದುಕೊಂಡಿತ್ತು. ಇಲ್ಲಿಯವರೆಗೆ, ಅರ್ಜಿದಾರರು ಪ್ರತಿಭಟಿಸುವ ನಿಯಮದ ಅಡಿಯಲ್ಲಿಯೇ ಸರ್ಕಾರದ ಎಲ್ಲ ಆದೇಶಗಳನ್ನು ಅನುಸರಿಸಿದ್ದಾರೆ. ನ್ಯಾಯಾಲಯದ ಮುಂದೆ ಸಲ್ಲಿಸಿದ ಅರ್ಜಿಯಲ್ಲಿ ಮಾತ್ರ ಅವರನ್ನು ಪ್ರಶ್ನಿಸುವ ಸ್ವಾತಂತ್ರ್ಯವನ್ನು ಕಾಯ್ದಿರಿಸಿಕೊಂಡಿದ್ದಾರೆ ಎಂದು ಟ್ವಿಟರ್ ತಿಳಿಸಿದೆ.
ನಿರ್ಬಂಧಿಸುವ ಆದೇಶಗಳ ಕೆಲವು ಭಾಗಗಳು ಸ್ಪಷ್ಟವಾಗಿ ಪಾಲಿಸಲು ಆಗದಂತವುಗಳಾಗಿವೆ. ಸೆಕ್ಷನ್ 69A ನ ಕಾರ್ಯವಿಧಾನದಲ್ಲಿ ಗಣನೀಯ ತಪ್ಪುಗಳಿದ್ದು, ಅದನ್ನು ರದ್ದುಗೊಳಿಸಬೇಕು ಎಂದು ವಾದಿಸಿದರು. ಪರ್ಯಾಯವಾಗಿ, ಸೆಕ್ಷನ್ 69A ಅನ್ನು ಉಲ್ಲಂಘಿಸುವ ನಿರ್ದಿಷ್ಟ ಟ್ವೀಟ್‌ಗಳನ್ನು ಗುರುತಿಸಲು ಮತ್ತು ಖಾತೆಯ ಅಮಾನತುಗಳನ್ನು ಹಿಂತೆಗೆದುಕೊಳ್ಳಲು ನಿರ್ಬಂಧಿಸುವ ಆದೇಶಗಳನ್ನು ಮಾರ್ಪಡಿಸಲು ಸಚಿವಾಲಯಕ್ಕೆ ನಿರ್ದೇಶಿಸಲಾಗಿದೆ.