ಕೊಲಂಬೊ: ಶ್ರೀಲಂಕಾದಲ್ಲಿ ಪ್ರಜಾಪ್ರಭುತ್ವ ಮೂಲಕ ಸ್ಥಿರತೆ ಮತ್ತು ಆರ್ಥಿಕ ಚೇತರಿಕೆ ಸಾಧಿಸಬೇಕೆಂಬ ಪ್ರಜೆಗಳ ಬಯಕೆಗೆ ಭಾರತ ಬೆಂಬಲವಾಗಿ ನಿಲ್ಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಲಂಕಾದ ನೂತನ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರಿಗೆ ಅಭಿನಂದನೆ ಸಲ್ಲಿಸುವ ನಿಟ್ಟಿನಲ್ಲಿ ಪ್ರಧಾನಿ ಅವರು ಕಳುಹಿಸಿರುವ ಅಭಿನಂದನಾ ಪತ್ರವನ್ನು ಟ್ವೀಟ್ ಮೂಲಕ ತಿಳಿಸಿರುವ ಕೊಲಂಬೊದಲ್ಲಿರುವ ಭಾರತದ ಹೈಕಮಿಷನಲ್ ಗೋಪಾಲ್ ಬಗ್ಲೇ, ಈ ಮಾಹಿತಿ ನೀಡಿದ್ದಾರೆ.
'ಭಾರತ ಮತ್ತು ಶ್ರೀಲಂಕಾ ನಡುವೆ ಹಲವಾರು ವರ್ಷಗಳ ನಿಕಟ ಬಾಂಧವ್ಯ ಇದ್ದು, ಎರಡೂ ದೇಶಗಳ ಜನರಿಗೆ ಪರಸ್ಪರ ಉಪಯೋಗವಾಗುವಂತಹ ಮತ್ತು ಸ್ನೇಹವನ್ನು ಬಲಪಡಿಸುವಂತಹ ನಿಟ್ಟಿನಲ್ಲಿ ಜತೆಯಾಗಿ ಕೆಲಸ ಮಾಡುವುದನ್ನು ನಾವು ಎದುರು ನೋಡುತ್ತಿದ್ದೇವೆ' ಎಂದು ಪ್ರಧಾನಿ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾಗಿ ಟ್ವಿಟರ್‌ನಲ್ಲಿ ತಿಳಿಸಲಾಗಿದೆ.
ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾಕ್ಕೆ ಭಾರತ ಕಳೆದ ಜನವರಿಯಿಂದೀಚೆಗೆ 4 ಶತಕೋಟಿ ಡಾಲರ್‌ಗಳಷ್ಟು ನೆರವನ್ನು ನೀಡಿದೆ. ಲಂಕಾದ 2.2 ಕೋಟಿ ಜನರಿಗೆ ಅಗತ್ಯದ ಸೌಲಭ್ಯ ನೀಡುವುದಕ್ಕಾಗಿ ಮುಂದಿನ ಆರು ತಿಂಗಳ ಅವಧಿಗೆ ಅದಕ್ಕೆ ಮತ್ತೆ 5 ಶತಕೋಟಿ ಡಾಲರ್‌ಗಳ ನೆರವಿನ ಅಗತ್ಯವಿದೆ ಎಂದು ಹೇಳಲಾಗುತ್ತಿದೆ.