ತಿರುವನಂತಪುರ: ಮಾಜಿ ಕಾಂಗ್ರೆಸ್ ನಾಯಕ ಸಂಜಯ್ ಗಾಂಧಿ ವಿರುದ್ಧ ಸಚಿವ ವಿಎನ್ ವಾಸವನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರುಕ್ಸಾನಾ ಸುಲ್ತಾನಾ ಎಂಬ ಮಾದಕ ಸುಂದರಿಯ ಮಡಿಲಲ್ಲಿ ತಲೆಯಿಟ್ಟು ಮಲಗಿದ್ದು ಸಂಜಯ್ ಗಾಂಧಿ ಎಂದು ವಾಸವನ್ ಹೇಳಿದ್ದಾರೆ. ಕೇರಳ ಸಹಕಾರಿ ಯೂನಿಯನ್ ತಿದ್ದುಪಡಿ ಮಸೂದೆ ಮೇಲಿನ ಚರ್ಚೆಗೆ ಉತ್ತರಿಸಿದ ಸಂದರ್ಭದಲ್ಲಿ ಸಚಿವರ ಈ ಮಾತುಗಳು ಹೊರಬಿದ್ದಿವೆ. ಇದರ ಬಳಿಕ ಪ್ರತಿಪಕ್ಷಗಳು ವಿಧಾನಸಭೆಯನ್ನು ಬಹಿಷ್ಕರಿಸಿದವು.
ಸಚಿವ ವಾಸವನ್ ಮಾತನಾಡಿ, 'ಇಂದಿರಾಗಾಂಧಿ ತುರ್ತುಪರಿಸ್ಥಿತಿ ಘೋಷಿಸಿ ದೇಶದ ಪ್ರಜಾಪ್ರಭುತ್ವವನ್ನು ಅಂಕೆಯಲ್ಲಿಟ್ಟ ವೇಳೆ ಸಂಜಯ್ ಗಾಂಧಿ ರುಕ್ಸಾನಾ ಸುಲ್ತಾನ ಎಂಬ ಸುಂದರಿಯ ಮಡಿಲಲ್ಲಿ ತಲೆಯಿಟ್ಟು ಮಲಗಿದ್ದರು' ಎಂದರು.
ಈ ಮಾತು ಪ್ರತಿಪಕ್ಷಗಳನ್ನು ಕೆರಳಿಸಿತು. ಇದನ್ನು ಸಚಿವರು ಕೂಡಲೇ ಹಿಂಪಡೆಯಬೇಕು ಎಂದು ಪ್ರತಿಪಕ್ಷ ನಾಯಕ ವಿ.ಡಿ.ಸತೀಶನ್ ಒತ್ತಾಯಿಸಿದರು. ಆಮೇಲೆ ನೋಡೋಣ ಎಂದು ಉಪಸಭಾಪತಿ ಹೇಳಿದರೂ ವಿಪಕ್ಷ ನಾಯಕರು ಅದಕ್ಕೆ ಸಿದ್ಧರಿರಲಿಲ್ಲ. ನಂತರ ಮುಖಂಡರು ಸಭೆ ಬಹಿಷ್ಕರಿಸಿದರು.
ಎಡಪಕ್ಷಗಳ ನಾಯಕರು ವಿವಾದಾತ್ಮಕ ಸರಣಿ ಹೇಳಿಕೆ ನೀಡಿ ಟೀಕೆಗೆ ಗುರಿಯಾಗುತ್ತಿರುವ ಸಂದರ್ಭದಲ್ಲಿಯೇ ಸಚಿವ ವಾಸವನ್ ಈ ಹೊಸ ಹೇಳಿಕೆ ಮತ್ತೆ ವಿವಾದಕ್ಕೆಡೆಯಾಗಿದೆ. ಈ ಹಿಂದೆ ಶಾಸಕ ಕೆ.ಕೆ.ರೆಮ ವಿರುದ್ಧ ಶಾಸಕ ಎಂ.ಎಂ.ಮಣಿ ಅವರು ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕೆಕೆ ರೆಮಾ ಅವರನ್ನು ಮಹತಿ ಎಂದು ಕರೆದ ಮಣಿ, ಆಕೆಯ ವೈದವ್ಯ ವಿಧಿಯ ಲೀಲೆ ಮತ್ತು ಇದರಲ್ಲಿ ಸಿಪಿಎಂ ಪಾತ್ರವಿಲ್ಲ ಎಂದು ಹೇಳಿದ್ದರು. ಇದರ ವಿರುದ್ಧ ಸಿಪಿಐನ ಹಿರಿಯ ನಾಯಕರೂ ಹರಿಹಾಯ್ದಿದ್ದಾರೆ.