ಕಾಸರಗೋಡು: ಹೊಸ ಪೀಳಿಗೆಯನ್ನು ಕೃಷಿಯತ್ತ ಆಕರ್ಷಿಸುವ ಹಾಗೂ ಬಂಜರು ಭೂಮಿಯನ್ನು ಕೃಷಿಯೋಗ್ಯಗೊಳಿಸುವ ನಿಟ್ಟಿನಲ್ಲಿ ಕಾಞಂಗಾಡು ನಗರಸಭೆ ಆಯೋಜಿಸಿದ ಮಳೆ ಉತ್ಸವ ಜನಾಕರ್ಷಣೆಗೆ ಕಾರಣವಾಯಿತು. ಕಾಞಂಗಾಡು ನಗರಸಭಾ ಕುಟುಂಬಶ್ರೀ ಸಿಡಿಎಸ್ ಎರಡರ ವತಿಯಿಂದ ಕಾಞಂಗಾಡು ಒಯಿಞವಳಪ್ಪು ಗದ್ದೆಯಲ್ಲಿ ಮಳೆ ಉತ್ಸವ ಆಯೋಜಿಸಲಾಗಿತ್ತು. ಮಹಿಳೆಯರು, ಮಕ್ಕಳು ಸೇರಿದಂತೆ ಹಲವು ಮಂದಿ ಮಳೆಹಬ್ಬದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ಕಾಞಂಗಾಡು ನಗರಸಭಾ ಅಧ್ಯಕ್ಷೆ ಕೆ.ವಿ.ಸುಜಾತಾ ಮಳೆಹಬ್ಬ ಉದ್ಘಾಟಿಸಿದರು. ನಗರಸಭಾ ವಾರ್ಡ್ ಕೌನ್ಸಿಲರ್ ನಜ್ಮಾ ರಫಿ ಅಧ್ಯಕ್ಷತೆ ವಹಿಸಿದ್ದರು. ಕುಟುಂಬಶ್ರೀ ಜಿಲ್ಲಾ ಮಿಷನ್ ಜಿಲ್ಲಾ ಸಂಯೋಜಕ ಟಿ.ಟಿ.ಸುರೇಂದ್ರನ್ ಮುಖ್ಯ ಭಾಷಣ ಮಾಡಿದರು. ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಹಮದ್ ಅಲಿ, ಕೆ. ಅನೀಸ್, ಮಾಯಾಕುಮಾರಿ ಮತ್ತು ಕೆ.ಸರಸ್ವತಿ ಉಪಸ್ಥಿತರಿದ್ದರು.ಕುಟುಂಬಶ್ರೀ ಸಿಡಿಎಸ್ ದ್ವಿತೀಯ ಅಧ್ಯಕ್ಷೆ ಕೆ.ಸುಜಿನಿ ಸ್ವಾಗತಿಸಿ, ಸದಸ್ಯ ಕಾರ್ಯದರ್ಶಿ ಪಿ. ವಿ ಜಯಚಂದ್ರ ವಂದಿಸಿದರು.
ಕೆಸರುಗದ್ದೆಯಲ್ಲಿ ಹಗ್ಗಜಗ್ಗಾಟ, ಕೆಸರಿನ ಓಟ, ಚೆಂಡನ್ನು ರವಾನಿಸುವುದು, ಅನ್ನದೊಂದಿಗೆ ಚಮಚದ ಓಟ, ಒಪ್ಪನ, ತಿರುವಾತಿರ, ಜಾನಪದ ಹಾಡುಗಳ ಸಪರ್ಧೆ ನಡೆಯಿತು. ಮಳೆಯಾಧಾರಿತ ಭತ್ತದ ಕೃಷಿಯೊಂದಿಗೆ ಮಳೆ ಹಬ್ಬ ಸಂಪನ್ನಗೊಂಡಿತು.