ತಿರುವನಂತಪುರ: ಕೇರಳದಲ್ಲಿ ವ್ಯಕ್ತಿಯೊಬ್ಬರಿಗೆ ಮಂಗನ ಕಾಯಿಲೆ ತಗುಲಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸ್ಪಷ್ಟನೆ ನೀಡಿದ್ದಾರೆ. ಮಂಕಿಪಾಕ್ಸ್ (ಮಂಗನ ಕಾಯಿಲೆ) ರೋಗಲಕ್ಷಣಗಳನ್ನು ಹೊಂದಿರುವ ವ್ಯಕ್ತಿಯನ್ನು ವೀಕ್ಷಣೆಗೆ ಒಳಪಡಿಸಲಾಯಿತು. ವಿದೇಶದಿಂದ ಬಂದ ವ್ಯಕ್ತಿಯಲ್ಲಿ ಈ ಲಕ್ಷಣ ಪತ್ತೆಯಾಗಿದೆ. ಪರೀಕ್ಷೆಯ ಫಲಿತಾಂಶಗಳನ್ನು ಪಡೆದ ನಂತರವೇ ರೋಗವನ್ನು ದೃಢೀಕರಿಸಬಹುದು. ಇಂದು ಸಂಜೆ ಪರೀಕ್ಷೆಯ ಫಲಿತಾಂಶ ಲಭ್ಯವಾಗಲಿದೆ. ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
ಮಂಕಿಪಾಕ್ಸ್ ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕದಲ್ಲಿದ್ದ ವ್ಯಕ್ತಿಯನ್ನು ಈಗ ನಿಗಾ ಇರಿಸಲಾಗಿದೆ. ಅವರ ಜೊಲ್ಲುರಸದ ಮಾದರಿಯನ್ನು ಪುಣೆ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಈ ಹಿಂದೆ ಹಲವು ದೇಶಗಳಲ್ಲಿ ಮಂಗನ ಕಾಯಿಲೆ ದೃಢಪಟ್ಟಿತ್ತು. ಇದರ ಆಧಾರದ ಮೇಲೆ ರಾಜ್ಯದಲ್ಲಿಯೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಮಂಕಿಪಾಕ್ಸ್ ಇರುವವರಲ್ಲಿ ಜ್ವರದ ಲಕ್ಷಣಗಳೂ ಇರುತ್ತವೆ. ವಿದೇಶದಿಂದ ಬಂದು ಮೂರೇ ದಿನಗಳಲ್ಲಿ ಈ ವ್ಯಕ್ತಿಯನ್ನು ಸರ್ಕಾರಿ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಅವರು ಯುಎಇಯಿಂದ ಬಂದವರು. ಈ ವ್ಯಕ್ತಿ ಕುಟುಂಬ ಸದಸ್ಯರೊಂದಿಗೆ ಮಾತ್ರ ನಿಕಟ ಸಂಬಂಧ ಹೊಂದಿದ್ದಾರೆ ಎಂದು ವರದಿಯಾಗಿದೆ. ಇದು ಪ್ರಾಣಿಗಳಿಂದ ಮನುಷ್ಯರಿಗೆ ಮತ್ತು ಮನುಷ್ಯರಿಂದ ಮನುಷ್ಯರಿಗೆ ಹರಡಬಹುದು. ಈ ವೈರಸ್ ಹೆಚ್ಚಾಗಿ ದೇಹ ದ್ರವಗಳ ಮೂಲಕ ಹರಡುತ್ತದೆ. ನಿಕಟ ಸಂಪರ್ಕ ಹೊಂದಿರುವವರಿಗೆ ಮಾತ್ರ ಸೋಂಕು ಹರಡುವ ಸಾಧ್ಯತೆ ಹೆಚ್ಚು ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.