ನವದೆಹಲಿ: 'ವಿಚಾರಣಾಧೀನ ಕೈದಿಗಳ ಬಗ್ಗೆ ಸಂವೇದನಾಶೀಲತೆಯ ಅಗತ್ಯತೆಯನ್ನು ಸುಪ್ರೀಂಕೋರ್ಟ್ ಹಲವಾರು ಸಂದರ್ಭಗಳಲ್ಲಿ ಪ್ರತಿಪಾದಿಸಿದೆ. ಹೀಗಾಗಿ, ಸ್ವಾತಂತ್ರ್ಯದ ಅಮೃತಮಹೋತ್ಸವದ ಈ ಸಂದರ್ಭದಲ್ಲಿ ವಿಚಾರಣಾಧೀನ ಕೈದಿಗಳ ಬಿಡುಗಡೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ನ್ಯಾಯಾಂಗ ಕ್ರಮ ಕೈಗೊಳ್ಳಬೇಕು' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಶನಿವಾರ ಇಲ್ಲಿ ಆರಂಭವಾದ ಎರಡು ದಿನಗಳ ಅಖಿಲ ಭಾರತ ಜಿಲ್ಲಾ ಕಾನೂನುಸೇವೆಗಳ ಪ್ರಾಧಿಕಾರಗಳ ಪ್ರಥಮ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.
'ವಿಚಾರಣಾಧೀನ ಕೈದಿಗಳಿಗೆ ಕಾನೂನು ನೆರವು ಒದಗಿಸುವ ಜವಾಬ್ದಾರಿಯನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಿಗಳು (ಡಿಎಲ್‌ಎಸ್‌ಎ) ವಹಿಸಿಕೊಳ್ಳಬೇಕು. ಇಂಥ ಕ್ರಮಗಳಿಂದ ವಿಚಾರಣಾಧೀನ ಕೈದಿಗಳ ಬಿಡುಗಡೆ ಪ್ರಕ್ರಿಯೆಗೆ ಮತ್ತಷ್ಟೂ ವೇಗ ಸಿಗಲಿದೆ' ಎಂದು ಮೋದಿ ಹೇಳಿದರು.
'ಸುಲಲಿತ ವ್ಯಾಪಾರ, ಸುಲಲಿತ ಜೀವನದಂತೆಯೇ ನ್ಯಾಯ ನೀಡುವ ಪ್ರಕ್ರಿಯೆಯೂ ಸರಳವಾಗಿರಬೇಕು. ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆಯ ಈ ಸಂದರ್ಭದಲ್ಲಿ ಕೈಗೊಳ್ಳುವ ಇಂತಹ ಸಂಕಲ್ಪವು ಮುಂದಿನ 25 ವರ್ಷಗಳ ಅವಧಿಯಲ್ಲಿ ದೇಶವನ್ನು ಮತ್ತಷ್ಟೂ ಎತ್ತರಕ್ಕೆ ಕೊಂಡೊಯ್ಯುವುದು' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಚಾರಣಾಧೀನ ಕೈದಿಗಳ ಬಿಡುಗಡೆಗೆ ಸಂಬಂಧಿಸಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು (ಎನ್‌ಎಎಲ್‌ಎಸ್‌ಎ) ಕೈಗೊಂಡಿರುವ ಅಭಿಯಾನವನ್ನು ಶ್ಲಾಘಿಸಿದ ಪ್ರಧಾನಿ, ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯದಲ್ಲಿ ತೊಡಗುವಂತೆ ವಕೀಲರ ಸಂಘ ಅವರನ್ನು ಉತ್ತೇಜಿಸಬೇಕು ಎಂದರು.
ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಯು.ಯು.ಲಲಿತ್, ಡಿ.ವೈ.ಚಂದ್ರಚೂಡ್, ಕಾನೂನು ಸಚಿವ ಕಿರಣ್ ರಿಜಿಜು, ಕೇಂದ್ರ ಕಾನೂನು ಖಾತೆ ರಾಜ್ಯ ಸಚಿವ ಎಸ್.ಪಿ.ಎಸ್ ಬಘೇಲ್ ಇದ್ದರು.
ಹೈಕೋರ್ಟ್‌ಗಳ ಮುಖ್ಯನ್ಯಾಯಮೂರ್ತಿಗಳು, ರಾಜ್ಯ ಕಾನೂನುಸೇವೆಗಳ ಪ್ರಾಧಿಕಾರಗಳ (ಎಸ್‌ಎಲ್‌ಎಸ್‌ಎ) ಕಾರ್ಯಕಾರಿ ಚೇರಮನ್‌ಗಳು ಹಾಗೂ ಡಿಎಲ್‌ಎಸ್‌ಎಗಳ ಚೇರಮನ್ ಪಾಲ್ಗೊಂಡಿದ್ದರು.