ಪತ್ತನಂತಿಟ್ಟು: ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಗುರುವಾಯೂರಿನಲ್ಲಿ ಪೂರ್ಣಗೊಂಡಿರುವ ಯೋಜನೆಗಳು ಭಕ್ತರಿಗೆ ಮುಕ್ತವಾಗಿಲ್ಲ ಎಂದು ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಮೌಲ್ಯಮಾಪನ ಮಾಡಲು ಕೇಂದ್ರ ಸಚಿವರು ಮೊನ್ನೆ ಸಂಜೆ ತ್ರಿಶೂರ್ ತಲುಪಿದ್ದರು. ನಂತರ ಗುರುವಾಯೂರಿಗೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿದರು.
ಕೇಂದ್ರ ಯೋಜನೆಯಡಿ ಗುರುವಾಯೂರಿನಲ್ಲಿ ಬಹು ಹಂತದ ಪಾರ್ಕಿಂಗ್ ಸೌಲಭ್ಯ ಸಂಕೀರ್ಣ, ಎರಡು ಸೌಲಭ್ಯ ಕೇಂದ್ರಗಳು, ಭಕ್ತರಿಗೆ ವಿಶ್ರಾಂತಿ ಮತ್ತು ಮೂಲಭೂತ ಅಗತ್ಯಗಳನ್ನು ನೋಡಿಕೊಳ್ಳುವ ಕೇಂದ್ರ - ಮುಂತಾದ ಮೂಲಭೂತ ಸೌಕರ್ಯಗಳನ್ನು ಅಳವಡಿಸಲಾಗಿದೆ. ಈ ಯೋಜನೆಗಳ ಉದ್ಘಾಟನೆಯಾಗಿ ಸುಮಾರು ಎರಡು ವರ್ಷಗಳೇ ಕಳೆದಿವೆ. ಆದರೆ ಇದನ್ನು ಭಕ್ತರಿಗೆ ತೆರೆಯುವುದಾಗಲಿ, ಕಾರ್ಯಾಚರಣೆ ಆರಂಭಿಸುವುದಕ್ಕಾಗಲಿ ನಗರಸಭೆ ಅಧಿಕಾರಿಗಳು ಇನ್ನೂ ಸಿದ್ಧವಾಗಿಲ್ಲ.
ಕೆಸರಿನ ರಸ್ತೆಯ ಮೂಲಕ ಕೇಂದ್ರ ಸಚಿವರು ಫೆಸಿಲಿಟೇಶನ್ ಸೆಂಟರ್ ತಲುಪಿದರು. ಈ ವೇಳೆ ಎಲ್ಲಾ ಕಾಮಗಾರಿ ಪೂರ್ತಿಯಾಗಿ ಉದ್ಘಾಟನೆಗೊಂಡರೂ ಇನ್ನೂ ಸಾರ್ವಜನಿಕರಿಗೆ ವಿಮುಕ್ತಗೊಳಿಸದಿರುವುದು ಗಮನಕ್ಕೆ ಬಂತು. ಕೇಂದ್ರ ಸಚಿವರ ಆಗಮನದ ಕುರಿತು ನಗರಸಭೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಅವರು ಬರುವಾಗ ಯಾರೂ ಇದ್ದಿರಲಿಲ್ಲ.
ಆಗ ಸಚಿವರು ನಗರಸಭೆ ಕಾರ್ಯದರ್ಶಿಯನ್ನು ಕರೆದು ತಂಗುದಾಣವನ್ನು ತೆರೆದು ಒಳಗೆ ಹೋದರು. ಪರೀಕ್ಷಿಸಿದಾಗ ಅದು ಧೂಳಿನಿಂದ ಆವೃತವಾಗಿರುವುದು ಕಂಡುಬಂತು. ಘಟನೆಯ ಕುರಿತು ವಿವರಣೆ ಕೇಳಿದಾಗ ನಗರಪಾಲಿಕೆ ಕಾರ್ಯದರ್ಶಿಯವರು ಕೇಂದ್ರದ ನಿರ್ಮಾಣ ಪೂರ್ಣಗೊಳಿಸಿರುವ ಉರಾಳುಂಗಲ್ ಲೇಬರ್ ಸೊಸೈಟಿ ಕೀಗಳನ್ನು ಹಸ್ತಾಂತರಿಸಿಲ್ಲ ಮತ್ತು ಪ್ರಕ್ರಿಯೆಗಳು ಪ್ರಗತಿಯಲ್ಲಿವೆ ಎಂದು ಸಮರ್ಥನೆಗಳನ್ನು ನೀಡಿದರು. ಆದರೆ ಇದನ್ನು ಒಪ್ಪಲು ಸಚಿವರು ಸಿದ್ಧರಿರಲಿಲ್ಲ.
ಉದ್ಘಾಟನೆಯಾಗಿ ಎರಡು ವರ್ಷ ಕಳೆದರೂ ಕೇಂದ್ರಗಳು ತೆರೆದಿಲ್ಲ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಉದ್ಘಾಟನೆಯಾದ ಸಂಕೀರ್ಣಗಳನ್ನು ಆರಂಭಿಸಲು ಅಡ್ಡಿ ಏನು ಎಂದು ಸಚಿವರು ಪ್ರಶ್ನಿಸಿದರು. ಜನರ ಕಲ್ಯಾಣಕ್ಕಾಗಿ ಕೇಂದ್ರ ಕೋಟಿಗಟ್ಟಲೆ ಖರ್ಚು ಮಾಡಿದೆ ಎಂದರು. ಈ ಬಗ್ಗೆ ಸಂಬಂಧಪಟ್ಟ ಸಚಿವಾಲಯಕ್ಕೆ ಮಾಹಿತಿ ನೀಡಲಾಗುವುದು ಎಂದು ಸಚಿವರು ತಿಳಿಸಿದರು.