ನವದೆಹಲಿ: ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂನಂತಹ ಜನಪ್ರಿಯ ಸಾಮಾಜಿಕ ಜಾಲತಾಣಗಳ ಮಾತೃ ಸಂಸ್ಥೆಯಾದ ಮೆಟಾ ಭಾರತದಲ್ಲಿ ಫ್ಯಾಕ್ಟ್ ಚೆಕ್‌ಗೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಕ್ರಮ ತೆಗೆದುಕೊಂಡಿದೆ.
ಮತ್ತೆ 4 ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಫ್ಯಾಕ್ಟ್ ಚೆಕಿಂಗ್ ಸೌಲಭ್ಯವನ್ನು ಮೆಟಾ ವಿಸ್ತರಿಸಲು ಕ್ರಮ ಕೈಗೊಂಡಿದೆ.
ಈ ಪ್ರಕಾರ ಕಾಶ್ಮೀರಿ, ಭೋಜಪುರಿ, ಒಡಿಯಾ ಹಾಗೂ ನೇಪಾಳಿ ಭಾಷೆಗಳಲ್ಲಿ ಫ್ಯಾಕ್ಟ್ ಚೆಕಿಂಗ್‌ನ ಸೌಲಭ್ಯಗಳು ಬಳಕೆದಾರರಿಗೆ ಸಿಗಲಿವೆ.
ಈಗಾಗಲೇ ಇಂಗ್ಲಿಷ್, ಕನ್ನಡ, ಹಿಂದಿ, ತೆಲುಗು, ತಮಿಳು ಸೇರಿದಂತೆ 11 ಭಾಷೆಗಳಲ್ಲಿ ಫ್ಯಾಕ್ಟ್ ಚೆಕ್ ಸೌಲಭ್ಯವನ್ನು ಮೆಟಾ ನೀಡಿತ್ತು. ಇದೀಗ 15 ಭಾಷೆಗಳಲ್ಲಿ ಈ ಸೌಲಭ್ಯ ಸಿಕ್ಕಂತಾಗಿದೆ.
ಮಾಹಿತಿ ತಂತ್ರಜ್ಞಾನ ಕ್ರಾಂತಿಯಿಂದ ದಾರಿತಪ್ಪಿಸುವ ಹಾಗೂ ಸುಳ್ಳು ಸುದ್ದಿಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು ಇವುಗಳ ಕಡಿವಾಣಕ್ಕೆ ಸಾಮಾಜಿಕ ಮಾಧ್ಯಮಗಳನ್ನು ಮುನ್ನಡೆಸುವ ದೈತ್ಯ 'ಮೆಟಾ' ಕಂಪನಿ ಮುಂದಾಗಿದೆ.
ವಿಶೇಷವಾಗಿ ದಕ್ಷಿಣ ಭಾರತದದಿಂದ ಹರಡುವ ಫೇಕ್‌ನ್ಯೂಸ್ ಹಾಗೂ ಸಂಗತಿಗಳನ್ನು ತಡೆಗಟ್ಟಲು ಫ್ಯಾಕ್ಟ್ ಚೆಕಿಂಗ್‌ನಲ್ಲಿ ಮುಂಚೂಣಿಯಲ್ಲಿರುವ ಹೈದರಾಬಾದ್ ಮೂಲದ NewsMeter ನೊಂದಿಗೆ ಮೆಟಾ ಒಪ್ಪಂದ ಮಾಡಿಕೊಂಡಿದೆ.
ಪ್ರಪಂಚದಾದ್ಯಂತ 80 ವಿಶ್ವಾಸಾರ್ಹ ಸಂಸ್ಥೆಗಳ ಜೊತೆ ಮೆಟಾ, ಸುಳ್ಳು ಸಂಗತಿ ಹಾಗೂ ಆಕ್ಷೇಪಾರ್ಹ ಸಂಗತಿಗಳನ್ನು ತಡೆಗಟ್ಟಲು ಒಪ್ಪಂದ ಮಾಡಿಕೊಂಡಿದೆ.
'ಪ್ರಸ್ತುತ ದಿನಮಾನಗಳಲ್ಲಿ ಸುಳ್ಳುಗಳನ್ನು ಹರಡಲು ಸಾಮಾಜಿಕ ಮಾಧ್ಯಮಗಳನ್ನು ಕೆಲವರು ಬಳಸಿಕೊಳ್ಳುತ್ತಿದ್ದಾರೆ. ಇಂತಹ ಸಮಸ್ಯೆಯನ್ನು ಹತ್ತಿಕ್ಕಲು ನಾವು ಕಟಿಬದ್ಧವಾಗಿದ್ದು, ಜಗತ್ತಿನಲ್ಲಿ ಅತ್ಯಂತ ಬಲಶಾಲಿಯಾದ ಫ್ಯಾಕ್ಟ್ ಚೆಕಿಂಗ್ ನೆಟ್‌ವರ್ಕ್‌ನ್ನು ನಾವು ಹೊಂದಿದ್ದೇವೆ' ಎಂದು ಮೆಟಾ ಕಂಪನಿಯ ಸಹಭಾಗಿತ್ವ ವಿಭಾಗದ ನಿರ್ದೇಶಕ ಮನೀಶ್ ಚೋಪ್ರಾ ಹೇಳಿದ್ದಾರೆ.
'ಫ್ಯಾಕ್ಟ್ ಚೆಕ್‌ನಲ್ಲಿ ಬಹಿರಂಗಗೊಂಡ ತಪ್ಪು ಮಾಹಿತಿ ಹಾಗೂ ಸುಳ್ಳು ಸುದ್ದಿಗಳನ್ನು ಕೂಡಲೇ ಪ್ರಸಾರ ಮಾಡುವುದನ್ನು ನಾವು ನಿಲ್ಲಿಸುತ್ತಿದ್ದೇವೆ' ಎಂದು ಅವರು ತಿಳಿಸಿದ್ದಾರೆ.
ವಿಶೇಷವಾಗಿ ಭಾರತದಲ್ಲಿ ಸುಳ್ಳು ಸುದ್ದಿಗಳ ಹರಡುವಿಕೆ ತಡೆಗಟ್ಟುವಲ್ಲಿ ಭಾರತದ ಇಂಟರನೆಟ್ ಹಾಗೂ ಮೊಬೈಲ್ ಅಸೋಶಿಯೇಷನ್ ಗೆ ಹಣಕಾಸು ನೆರವು ನೀಡುವುದರೊಂದಿಗೆ ಮೆಟಾ ಸಹಭಾಗಿತ್ವವನ್ನು ಹೊಂದಿದೆ.