ಕೊಲ್ಲಂ: ಸೋಮವಾರ (ಜುಲೈ 18) ದೇಶಾದ್ಯಂತ ನೀಟ್ ಪರೀಕ್ಷೆ ನಡೆದಿದೆ. ಇದರ ನಡುವೆ ಕೇರಳದ ಕೊಲ್ಲಂನಲ್ಲಿರುವ ಮಾರ್ ಥೋಮಾ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ ನಡೆದಿರುವ ಅಮಾನವೀಯ ಘಟನೆ ದೇಶಾದ್ಯಂತ ಆಕ್ರೋಶದ ಕಿಡಿ ಹೊತ್ತಿಸಿದೆ.
ಕೊಲ್ಲಂ ಮೂಲದ 17 ವರ್ಷದ ವಿದ್ಯಾರ್ಥಿನಿ ಮಾಧ್ಯಮದ ಮುಂದೆ ಮಾತನಾಡಿದ್ದು, ಅದೊಂದು ಕೆಟ್ಟ ಅನುಭವ ಎಂದಿದ್ದಾಳೆ. ಪರೀಕ್ಷಾ ಕೇಂದ್ರದಲ್ಲಿ ಅವರು ನನ್ನನ್ನು ಕರೆದರು ಮತ್ತು ಸ್ಕ್ಯಾನಿಂಗ್ ಇರಲಿದೆ ಎಂದರು. ಸ್ಕ್ಯಾನ್ ಆದ ಬಳಿಕ ನಮ್ಮನ್ನು ಒಳಗೆ ಕಳುಹಿಸುತ್ತಾರೆ ಎಂದು ನಾವು ಭಾವಿಸಿದೆವು. ಆದರೆ, ಎರಡು ಕ್ಯೂಗಳಲ್ಲಿ ನಮ್ಮನ್ನು ನಿಲ್ಲಿಸಲಾಯಿತು. ಒಂದು ಕ್ಯೂ ಲೋಹದ ಕೊಕ್ಕೆ (ಮೆಟಲ್ ಹೂಕ್ಸ್) ಇಲ್ಲದ ಬ್ರಾ ಧರಿಸಿದವರಿಗೆ, ಹಾಗೇ ಇನ್ನೊಂದು ಕ್ಯೂ ಇತ್ತು.
ಇದಾದ ಬಳಿಕ ನೀವು ಲೋಹದ ಕೊಕ್ಕೆ ಇರುವ ಒಳ ಉಡುಪುಗಳನ್ನು ಧರಿಸಿದ್ದೀರಾ? ಎಂದು ಅವರು ನನ್ನನ್ನು ಕೇಳಿದರು. ಅದಕ್ಕೆ ನಾನು ಹೌದು ಎಂದೆ. ನಂತರ ಆ ಸಾಲಿನಲ್ಲಿ ನಿಲ್ಲುವಂತೆ ಹೇಳಿದರು. ನನಗೆ ಅಲ್ಲಿ ಏನು ನಡೆಯುತ್ತಿದೆ? ಮತ್ತು ಯಾಕೆ ಹೀಗೆ ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಆಗಲಿಲ್ಲ ಎಂದು ಸಂತ್ರಸ್ತ ವಿದ್ಯಾರ್ಥಿನಿ ತಿಳಿಸಿದ್ದಾಳೆ.
ಇದಾದ ನಂತರ ಬ್ರಾ ಕಳೆದು ಟೇಬಲ್ ಮೇಲೆ ಇಡುವಂತೆ ಕೇಳಿದರು. ಎಲ್ಲ ಬ್ರಾಗಳನ್ನು ಅಲ್ಲಿಯೇ ನೇತು ಹಾಕಿದ್ದರು. ನಾವು ಪರೀಕ್ಷೆ ಬರೆದು ಹಿಂತಿರುಗಿದಾಗ ನಮ್ಮದು ನಮಗೆ ಹಿಂತಿರುಗುತ್ತದೆ ಎಂಬ ಖಚಿತತೆಯು ಇರಲಿಲ್ಲ. ಪರೀಕ್ಷೆ ಬರೆದು ಮರಳಿ ಬಂದಾಗ ಅಲ್ಲಿ ತುಂಬಾ ಮಂದಿ ಇದ್ದರು. ಅದೊಂದು ಹರಸಾಹಸದ ಕ್ಷಣವಾಗಿತ್ತು. ಆದರೂ, ನನ್ನದ್ದನ್ನು ನಾನು ಮರಳಿ ಪಡೆದುಕೊಂಡೆ. ಯಾವುದೇ ವೈದ್ಯಕೀಯ ಆಕಾಂಕ್ಷಿಗಳು ತೆಗೆದುಕೊಳ್ಳಬಹುದಾದ ಪ್ರಮುಖ ಪರೀಕ್ಷೆಗಳಲ್ಲಿ ಎದುರಾದಂತಹ ನೋವಿನ ಕ್ಷಣವಿದು. ಇದನ್ನೆಂದು ಮರೆಯಲಾಗದು ಎಂದು ವಿದ್ಯಾರ್ಥಿನಿ ಹೇಳುವಾಗ ಆಕೆಯ ಕಣ್ಣಲ್ಲಿ ನೀರು ತುಂಬಿತ್ತು.
ಕೆಲವು ಹುಡುಗಿಯರು ತುಂಬಾ ನಾಚಿಕೆಯಿಂದ ಅಳುತ್ತಿದ್ದರು. ಈ ವೇಳೆ ಮಹಿಳಾ ಭದ್ರತಾ ಉದ್ಯೋಗಿಯೊಬ್ಬರು, ನೀವು ಯಾಕೆ ಅಳುತ್ತೀರಿ? ಎಂದು ಪ್ರಶ್ನಿಸಿದರು. ಇಂತಹ ಪರಿಸ್ಥಿತಿಯಲ್ಲೂ ತುಂಬಾ ನಿಷ್ಠುರತೆಯಿಂದ ಬ್ರಾಗಳನ್ನು ತೆಗೆದುಕೊಂಡು ಹೊರಗೆ ಹೋಗುವಂತೆ ಹೇಳಿದರು. ಬ್ರಾಗಳನ್ನು ಇಲ್ಲಿಯೇ ಧರಿಸಬೇಡಿ, ಕೈಯಲ್ಲಿ ತೆಗೆದುಕೊಂಡು ಹೊರಗೆ ಹೋಗಿ ಎಂದರು. ಅದನ್ನು ಕೇಳಿ ನಾವು ತುಂಬಾ ಮುಜುಗರಕ್ಕೀಡಾದೆವು. ಆದರೆ, ಎಲ್ಲರು ಬದಲಾಯಿಸಲು ಕಾಯುತ್ತಿದ್ದರು. ಅಲ್ಲಿ ತುಂಬಾ ಕತ್ತಲಾಗಿತ್ತು ಮತ್ತು ಬದಲಾಯಿಸಲು ಸ್ಥಳವಿರಲಿಲ್ಲ. ನಿಜವಾಗಿಯೂ ಇದೊಂದು ಭಯಾನಕ ಅನುಭವ. ನಾವು ಪರೀಕ್ಷೆಯನ್ನು ಬರೆಯುವಾಗ ನಮ್ಮ ಕೂದಲುಗಳಿಂದ ನಮ್ಮ ಎದೆ ಭಾಗವನ್ನು ಮುಚ್ಚಿಕೊಳ್ಳಬೇಕಾಯಿತು. ನಮ್ಮ ಬಳಿ ಯಾವುದೇ ಶಾಲೂ ಅಥವಾ ಕವರ್ ಸಹ ಇರಲಿಲ್ಲ. ಪರೀಕ್ಷಾ ಕೇಂದ್ರದಲ್ಲಿ ಹುಡುಗರು ಮತ್ತು ಹುಡುಗಿಯರಿದ್ದರು ಮತ್ತು ನಿಜವಾಗಿಯೂ ಇದು ಕಷ್ಟಕರವಾಗಿತ್ತು. ತುಂಬಾ ಅನಾನುಕೂಲ ಪರಿಸ್ಥಿತಿಯನ್ನು ಎದುರಿಸಬೇಕಾಯಿತು ಎಂದು ಹುಡುಗಿ ತಿಳಿಸಿದಳು.
ಇನ್ನು ಈ ಆಘಾತಕಾರಿ ಘಟನೆ ಓರ್ವ ವಿದ್ಯಾರ್ಥಿನಿ ತನ್ನ ತಂದೆಗೆ ಈ ವಿಚಾರವನ್ನು ತಿಳಿಸಿದಾಗ ಬೆಳಕಿಗೆ ಬಂದಿದೆ. ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ ಬಳಿಕ ಈ ಘಟನೆ ಮಾಧ್ಯಮಗಳಿಗೆ ತಿಳಿಯಿತು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಚರ್ಚೆಯಾಗಿ ದೇಶಾದ್ಯಂತ ತೀವ್ರ ಆಕ್ರೋಶವು ವ್ಯಕ್ತವಾಯಿತು. ಶೇ. 90ರಷ್ಟು ವಿದ್ಯಾರ್ಥಿನಿಯರ ಒಳಉಡುಪುಗಳನ್ನು ತೆಗೆಸಿದ್ದಾರೆ ಎಂದು ಹೇಳಲಾಗಿದೆ.
ನಿಮ್ಮ ಭವಿಷ್ಯಕ್ಕಿಂತ ಒಳಉಡುಪು ನಿಮಗೆ ದೊಡ್ಡದಾಗಿದೆಯೇ? ಅದನ್ನು ತೆಗೆದುಹಾಕಿ ಮತ್ತು ನಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ ಎಂದು ಪರೀಕ್ಷಾ ಕೇಂದ್ರದ ಭದ್ರತಾ ಸಿಬ್ಬಂದಿಯೊಬ್ಬರು ನೀಡಿದ ಹೇಳಿಕೆಯನ್ನು ಸಂತ್ರಸ್ತ ವಿದ್ಯಾರ್ಥಿನಿ ತಂದೆಯ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮಂಗಳವಾರ ಇನ್ನು ಎರಡು ದೂರುಗಳು ದಾಖಲಾಗಿದೆ.
ಇದರ ಬೆನ್ನಲ್ಲೇ ಘಟನೆಯ ಕುರಿತು ತನಿಖೆ ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಸತ್ಯಶೋಧನಾ ತಂಡಕ್ಕೆ ಆದೇಶಿಸಿದೆ. ರಾಷ್ಟ್ರೀಯ ಮಹಿಳಾ ಆಯೋಗವು ಕೂಡ ಈ ಘಟನೆಯನ್ನು ಖಂಡಿಸಿದೆ. ಇದೊಂದು ಅತಿರೇಕ ಎಂದು ಕರೆದಿದೆ.