ಬದಿಯಡ್ಕ: ಶ್ರೀಕೃಷ್ಣ ಚರಿತಮ್ ತಾಳಮದ್ದಳೆ ಸಪ್ತಾಹದ ಅಂಗವಾಗಿ ಮೊದಲ ದಿನ ರುಕ್ಮಿಣಿ ಸ್ವಯಂವರ ಪ್ರಸಂಗದ ಯಕ್ಷಗಾನ ತಾಳಮದ್ದಳೆ ಜರಗಿತು. ಹಿಮ್ಮೇಳದಲ್ಲಿ ಪಟ್ಲ ಸತೀಶ್ ಶೆಟ್ಟಿ ಮತ್ತು ರವಿಚಂದ್ರ ಕನ್ನಡಿಕಟ್ಟೆ ದ್ವಂದ್ವ ಹಾಡುಗಾರಿಕೆ ಮನಸೂರೆಗೊಂಡಿತು. ಪ್ರಾರಂಭದಲ್ಲಿ ಅಮೃತಾ ಅಡಿಗ ಅವರ ಭಾಗವತಿಕೆ ಉತ್ತಮವಾಗಿ ಮೂಡಿಬಂತು. ಜೊತೆಗೆ ಲವಕುಮಾರ್ ಐಲ, ಕೌಶಿಕ್ ರಾವ್ ಪುತ್ತಿಗೆ ಚೆಂಡೆ ಮದ್ದಳೆಯೂ ಮನ ತಣಿಸಿತು. ಅರ್ಥಧಾರಿಗಳಾಗಿ ರಾಧಾಕೃಷ್ಣ ಕಲ್ಚಾರ್, ರಾಜೇಂದ್ರ ಕಲ್ಲೂರಾಯ, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ವಾದಿರಾಜ ಕಲ್ಲೂರಾಯ, ಸೀತಾರಾಮಕುಮಾರ್ ಕಟೀಲು ಸಮರ್ಥವಾಗಿ ತಮ್ಮ ಪಾತ್ರಗಳಿಗೆ ಜೀವ ತುಂಬಿದರು.
ದ್ವಿತೀಯ ದಿನವಾದ ನಿನ್ನೆ ಜಾಂಬವತೀ ಕಲ್ಯಾಣ ಆಖ್ಯಾಯಿಕೆಯ ಕೂಟ ನಡೆಯಿತು. ಹಿಮ್ಮೇಳದಲ್ಲಿ ಸತ್ಯನಾರಾಯಣ ಪುಣ್ಚಿತ್ತಾಯ ಪೆರ್ಲ, ಗಿರೀಶ್ ರೈ ಕಕ್ಕೆಪದವು, ಲವಕುಮಾರ ಐಲ ಹಾಗೂ ಶ್ರೀಧರ ವಿಟ್ಲ ಮುನ್ನಡೆಸಿದರೆ ವಿಟ್ಲ ಶಂಭು ಶರ್ಮ, ಎಂ.ಎಲ್.ಸಾಮಗ ಮಲ್ಪೆ, ರಾಧಾಕೃಷ್ಣ ಕಲ್ಚಾರ್, ಶೇಣಿ ವೇಣುಗೋಪಾಲ ಭಟ್ ಶೇಣಿ ಪಾತ್ರಪೋಷಣೆ ಮಾಡಿದರು.
ಇಂದು ಸುಭದ್ರಾಕಲ್ಯಾಣ ಪ್ರಸಂಗದ ತಾಳಮದ್ದಳೆ ನಡೆಯಲಿದ್ದು, ಚಿನ್ಮಯ ಕಲ್ಲಡ್ಕ, ಕೃಷ್ಣ ಪ್ರಕಾಶ ಉಳಿತ್ತಾಯ, ಶ್ರೀಧರ ವಿಟ್ಲ ಹಾಗೂ ಮುಮ್ಮೇಳದಲ್ಲಿ ಡಾ.ಎಂ.ಪ್ರಭಾಕರ ಜೋಶಿ, ಡಾ.ರಮಾನಂದ ಬನಾರಿ, ವಿದ್ವಾನ್. ಹಿರಣ್ಯ ವೆಂಕಟೇಶ್ವರ ಭಟ್, ಸುರೇಶ ಕುದ್ರೆಂತಾಯ, ಹರೀಶ ಬಳಂತಿಮೊಗರು ಪಾತ್ರ ನಿರ್ವಹಣೆ ಮಾಡುವರು.