ಕಾಸರಗೋಡು: ಜಿಲ್ಲೆಯಲ್ಲಿ ಬಿರುಸಿನ ಮಳೆ ಮುಂದುವರಿದಿದ್ದು, ಸತತ ಮೂರು ದಿವಸಗಳ ಕಾಲ ಯೆಲ್ಲೋ ಅಲರ್ಟ್ ಜಾರಿಯಲ್ಲಿದೆ.ನಿರಂತರ ಮಳೆಯಾಗುತ್ತಿರುವುದರಿಂದ ಹೊಳೆಗಳು ತುಂಬಿ ಹರಿಯುತ್ತಿದೆ. ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿರುವುದರಿಂದ ಮನೆಗಳಿಗೆ ನೀರು ನುಗ್ಗಿದ್ದು, ಇಲ್ಲಿನ ನಿವಾಸಿಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ.ಅಗ್ನಿಶಾಮಕ ದಳ, ಪೊಲೀಸ್ ಹಾಗೂ ನಾಗರಿಕರು ಕಾರ್ಯಾಚರಣೆಯಲ್ಲಿ ಸಹಕರಿಸಿದರು. ಬಿರುಸಿನ ಮಳೆ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಸತತ ಮೂರು ದಿವಸಗಳಿಂದ ಶಾಲೆಗಳಿಗೆ ರಜೆ ಸಾರಲಾಗಿದೆ.
ಮಧೂರು ಸನಿಹ ಪುರುಷೋತ್ತಮ ಎಂಬವರ ಮನೆಗೆ ವಿದ್ಯುತ್ ಕಂಬ ಬಿದ್ದು, ಹಾನಿಯುಂಟಾಗಿದೆ. ಮಧೂರು ಪಟ್ಲ ಬಯಲು ಸಂಪೂರ್ಣ ಜಲಾವೃತವಾಗಿದೆ. ಬಯಲಿನ ಬಹುತೇಕನಿವಾಸಿಗಳನ್ನು ಅಗ್ಮಿಶಾಮಕದಳ ಸಿಬ್ಬಂದಿ ಸುರಕ್ಷಿತ ಜಾಗಕ್ಕೆ ಸ್ಥಳಾಂತರಗೊಳಿಸಿದ್ದಾರೆ. ಉಳಿಯತ್ತಡ್ಕ ಮನ್ನಿಪ್ಪಾಡಿ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಕಳೆದ ಮೂರು ದಿವಸಗಳಿಂದ ಕತ್ತಲೆಯಲ್ಲಿ ಕಳೆಯುವಂತಾಗಿದೆ.