ಕಾಸರಗೋಡು: ತಾನು ಪ್ರೀತಿಸಿದ ಯುವಕನ ಜತೆ ವಿವಾಹವಾಗುವುದಕ್ಕೆ ಜಾತಕ ತಡೆಯಾದ ಹಿನ್ನೆಲೆಯಲ್ಲಿ ಯುವತಿ ಇಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಮೂಲತ: ತಮಿಳ್ನಾಡು ನಿವಾಸಿ, ಪ್ರಸ್ತುತ ಚೆಮ್ನಾಡಿನ ಕೊಂಬನಡ್ಕದಲ್ಲಿ ವಾಸಿಸುತ್ತಿರುವ ಶಿವ ಎಂಬವರ ಪುತ್ರಿ ಮಲ್ಲಿಕಾ ಯಾನೆ ಪ್ರಿಯಾ(24)ಸಾವಿಗೆ ಶರಣಾದ ಯುವತಿ. ತಮಿಳ್ನಾಡು ನಿವಾಸಿ ಹಾಗೂ ಕುಂಬಳೆಯಲ್ಲಿ ವಾಸಿಸುತ್ತಿರುವ ಸಂಬಂಧಿಯೂ ಆದ ಯುವಕನನ್ನು ಈಕೆ ಪ್ರೀತಿಸುತ್ತಿದ್ದು, ಇಬ್ಬರೂ ವಿವಾಹವಾಗಲು ತೀರ್ಮಾನಿಸಿದ್ದರು. ಈ ವಿಷಯ ಇಬ್ಬರ ಮನೆಯವರಿಗೆ ತಿಳಿಸಿ ವಿವಾಹ ಸಿದ್ಧತೆಯ ಮಧ್ಯೆ ಜಾತಕ ನೋಡಲು ಮುಂದಾದರು.
ಆದರೆ ಯುವತಿಗೆ ತಾನು ಪ್ರೀತಿಸುತ್ತಿದ್ದ ಯುವಕನ ಜತೆ ವಿವಾಹ ಜಾತಕ ಕೂಡಿಬಾರದಿರುವುದರಿಂದ ಮದುವೆ ಮುರಿದುಬಿದ್ದಿತ್ತು. ಇದರಿಂದ ಮಾನಸಿಕವಾಗಿ ನೊಂದುಕೊಂಡಿದ್ದ ಮಲ್ಲಿಕಾ ಸಾವಿಗೆ ಶರಣಾಗಿರಬೇಕೆಂದು ಶಂಕಿಸಲಾಗಿದೆ. ಮಲ್ಲಿಕಾ ಜುಲೈ 1ರಂದು ಇಲಿವಿಷ ಸೇವಿಸಿದ್ದು, ಗಂಭೀರಾವಸ್ಥೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಗಂಭೀರಾವಸ್ಥೆಯಲ್ಲಿದ್ದ ಇವರಿಂದ ಮ್ಯಾಜಿಸ್ಟ್ರೇಟ್ ಅವರು ಆಸ್ಪತ್ರೆಗೆ ತೆರಳಿ ಹೇಳಿಕೆ ಪಡೆದುಕೊಂಡಿದ್ದರು.