HEALTH TIPS

ಚಿನ್ನದ ಹೊಳಪಿನಲ್ಲಿ ರೂಪಾಯಿ ಕಳಾಹೀನ!

              ಡಾಲರ್ ಎದುರು ರೂಪಾಯಿ ಮೌಲ್ಯ ಏಕೆ ಕುಸಿಯುತ್ತಿದೆ? ಚಿನ್ನದ ಆಮದಿಗೆ ಡಾಲರ್ ರೂಪದಲ್ಲಿ ಹಣ ಪಾವತಿಸಬೇಕಾಗಿರುವುದು ರೂಪಾಯಿ ಅಪಮೌಲ್ಯವಾಗಲು ಪ್ರಮುಖ ಕಾರಣವಾಗಿದೆ. ರಷ್ಯಾ-ಯೂಕ್ರೇನ್ ಯುದ್ಧ ಕಾರಣದಿಂದ ತೈಲೋತ್ಪನ್ನ ಬೆಲೆಗಳು ಹೆಚ್ಚಾಗಿರುವುದು ಕೂಡ ರೂಪಾಯಿ ಎದುರು ಡಾಲರ್ ಬಲವರ್ಧನೆಗೊಳ್ಳಲು ಆಸ್ಪದ ನೀಡಿದೆ.

          ಕೇಂದ್ರ ಸರ್ಕಾರವು ಈಚೆಗೆ ಚಿನ್ನದ ಮೇಲಿನ ಆಮದು ಸುಂಕವನ್ನು ಶೇ. 10.75 ರಿಂದ ಶೇ. 15ಕ್ಕೆ ಏರಿಸಿದೆ. ಭಾರತೀಯ ಕರೆನ್ಸಿಯನ್ನು ಬೆಂಬಲಿಸಲು ಮತ್ತು ವ್ಯಾಪಾರ ಕೊರತೆ ಅಥವಾ ಆಮದು- ರಫ್ತು ನಡುವಿನ ವ್ಯತ್ಯಾಸವನ್ನು ತಗ್ಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಏಪ್ರಿಲ್ 1ರ ಹೊತ್ತಿಗೆ ಒಂದು ಡಾಲರ್ ಬೆಲೆ ಸುಮಾರು -ಠಿ; 75.9 ಆಗಿದ್ದರೆ, ಪ್ರಸ್ತುತ ಇದು -ಠಿ; 79 ರಷ್ಟಾಗಿದೆ.

               ಭಾರತೀಯರಿಗೆ ಚಿನ್ನದ ಮೇಲೆ ಮಹಾಮೋಹ. ಹಾಗಂತ ನಮ್ಮಲ್ಲಿ ಚಿನ್ನದ ಉತ್ಪಾದನೆ ತೀರ ಕಡಿಮೆ. ಅಲ್ಲದೆ, ಉತ್ಪಾದಿಸಿದ್ದರಲ್ಲಿ ಬಹಳಷ್ಟನ್ನು ಇಲ್ಲಿಯೇ ಬಳಸ ಲಾಗುತ್ತದೆ. 2021ನೇ ಹಣಕಾಸು ವರ್ಷದಲ್ಲಿ, ದೇಶೀಯ ಚಿನ್ನ ಉತ್ಪಾದನೆಯು ಕೇವಲ 1,127 ಕೆ.ಜಿ. ಆಗಿತ್ತು. ಇದಕ್ಕೆ ಹೋಲಿಸಿದರೆ, ಚಿನ್ನದ ಆಮದು 6,51,240 ಕೆ.ಜಿ. ಯಷ್ಟಿತ್ತು. ಇದು ಬೇಡಿಕೆ ಮತ್ತು ದೇಶೀಯ ಪೂರೈಕೆಯ ನಡುವೆ ಅಗಾಧ ಕೊರತೆ ಇರುವುದನ್ನು ತೋರಿಸುತ್ತದೆ.

              ಕಳೆದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 1,39,943 ಕೆಜಿ ಚಿನ್ನವನ್ನು ಆಮದು ಮಾಡಿಕೊಳ್ಳಲಾಗಿದೆ. ಇದು ಹಿಂದಿನ ವರ್ಷಕ್ಕಿಂತ ಶೇ. 7.4 ಕ್ಕಿಂತ ಹೆಚ್ಚು. ಒಟ್ಟಾರೆಯಾಗಿ ಈ ಆಮದು ಮಾಡಿದ ಚಿನ್ನಕ್ಕೆ 7.78 ಶತಕೋಟಿ ಡಾಲರ್ (ಅಂದರೆ 61,400 ಕೋಟಿ ರೂಪಾಯಿ) ಪಾವತಿಸಲಾಗಿದೆ, 2021ರ ಏಪ್ರಿಲ್-ಮೇ ತಿಂಗಳಿಗೆ ಹೋಲಿಸಿದರೆ ಈ ಹಣ ಪಾವತಿ ಶೇ. 11.8 ರಷ್ಟು ಹೆಚ್ಚಳವಾಗಿದೆ. ಜೂನ್ ತಿಂಗಳ ಅಂಕಿ-ಅಂಶಗಳು ಇನ್ನೂ ಲಭ್ಯವಿಲ್ಲದಿದ್ದರೂ, ಕಳೆದ ವರ್ಷಕ್ಕೆ ಹೋಲಿಸಿದರೆ ಚಿನ್ನದ ಆಮದು ಹೆಚ್ಚಾಗಿರುವ ಸಾಧ್ಯತೆಯಿದೆ.

              ಸಾಮಾನ್ಯವಾಗಿ ಹಣದುಬ್ಬರದ ನಿರೀಕ್ಷೆಗಳು ಹೆಚ್ಚಿರುವಾಗ ಜನರು ಇದನ್ನು ಅಧಿಕ ಪ್ರಮಾಣದಲ್ಲಿ ಖರೀದಿಸುತ್ತಾರೆ. ಚಿನ್ನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಾಲರ್​ಗಳಲ್ಲಿ ಖರೀದಿಸಲಾಗುತ್ತದೆ ಮತ್ತು ಮಾರಾಟ ಮಾಡಲಾಗುತ್ತದೆ. ಆದ್ದರಿಂದ, ಆಮದು ಮಾಡಿದ ಚಿನ್ನಕ್ಕೆ ಹಣವನ್ನು ಡಾಲರ್​ಗಳಲ್ಲಿ ಪಾವತಿಸಬೇಕಾಗುತ್ತದೆ. ಇದು ಡಾಲರ್​ಗೆ ಬೇಡಿಕೆಯನ್ನು ಹೆಚ್ಚಿಸಿ ರೂಪಾಯಿ ಮೌಲ್ಯದ ಕುಸಿತಕ್ಕೆ ಕಾರಣವಾಗುತ್ತದೆ. ಚಿನ್ನದ ಆಮದು ಮಾತ್ರ ರೂಪಾಯಿ ಮೇಲೆ ಒತ್ತಡ ಹೇರುತ್ತಿಲ್ಲ; ಇನ್ನೂ ಅನೇಕ ಅಂಶಗಳು ಇವೆ.

           ವಿದೇಶಿಗರಿಂದ ಷೇರು ಮಾರಾಟ: ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಕಳೆದ ಅಕ್ಟೋಬರ್​ನಿಂದ ಇದುವರೆಗೆ ಒಟ್ಟಾರೆಯಾಗಿ 33.6 ಶತಕೋಟಿ ಡಾಲರ್ (ಅಂದರೆ, 2654 ಶತಕೋಟಿ ರೂಪಾಯಿ) ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

                ತೈಲ ಬೆಲೆ ಹೆಚ್ಚಳ: ರಷ್ಯಾ-ಯೂಕ್ರೇನ್ ಯುದ್ಧದಿಂದಾಗಿ, ತೈಲ, ಕಲ್ಲಿದ್ದಲು ಮತ್ತು ರಸಗೊಬ್ಬರಗಳಂತಹ ಸರಕುಗಳ ಬೆಲೆ ಹೆಚ್ಚಾಗಿದೆ. ಇದರಿಂದಾಗಿ, ಈ ಸರಕುಗಳಿಗೆ ಹೆಚ್ಚಿನ ಆಮದು ಬಿಲ್ ಪಾವತಿಸಬೇಕಾಗಿದೆ. ಇದನ್ನು ಕೂಡ ಡಾಲರ್​ಗಳಲ್ಲೇ ಪಾವತಿಸಬೇಕಾಗಿದೆ. ಹೀಗಾಗಿ, ಡಾಲರ್​ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇದಲ್ಲದೆ, ಜನವರಿ ಮತ್ತು ಮೇ ನಡುವೆ, ತೈಲ, ಚಿನ್ನ, ಬೆಳ್ಳಿಯೇತರ ಸರಕುಗಳ ಆಮದು 188.4 ಶತಕೋಟಿ ಡಾಲರ್ (ಅಂದರೆ, 14,88,300 ಕೋಟಿ ರೂಪಾಯಿ) ಆಗಿದೆ. ಇದು ಹಿಂದಿನ ವರ್ಷಕ್ಕಿಂತ ಶೇ. 32ರಷ್ಟು ಹೆಚ್ಚಾಗಿದೆ. ಹೆಚ್ಚಿನ ಚಿನ್ನದ ಆಮದಿನ ಜತೆಗೆ ಈ ಎಲ್ಲಾ ಅಂಶಗಳು ಡಾಲರ್ ಎದುರು ರೂಪಾಯಿ ಮೌಲ್ಯದ ಮೇಲೆ ಒತ್ತಡ ಹೇರಿವೆ.

              ಚಿನ್ನದ ಆಮದು ಸುಂಕ ಹೆಚ್ಚಳವಲ್ಲದೆ, ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ರಫ್ತಿನ ಮೇಲೆ ಸೆಸ್ ವಿಧಿಸಿದೆ. ಸೆಸ್​ಗಳು ಕ್ರಮವಾಗಿ ಪ್ರತಿ ಲೀಟರ್ ಪೆಟ್ರೋಲ್​ಗೆ -ಠಿ;6 ಮತ್ತು ಡೀಸೆಲ್​ಗೆ -ಠಿ;13 ಇವೆ. ಇದು ಪೆಟ್ರೋಲ್ ಮತ್ತು ಡೀಸೆಲ್​ನ ದೇಶೀಯ ಪೂರೈಕೆಯನ್ನು ಹೆಚ್ಚಿಸುತ್ತದೆ ಮತ್ತು ತೈಲ ಮತ್ತು ಅದರ ಉತ್ಪನ್ನಗಳ ಮೇಲಿನ ಆಮದು ಅವಲಂಬನೆ ಕಡಿಮೆ ಮಾಡುತ್ತದೆ ಎಂದು ಆಶಿಸಲಾಗಿದೆ. ತೈಲ ಬಳಕೆಯ ಮೇಲಿನ ಆಮದು ಅವಲಂಬನೆಯು ಮೇ ತಿಂಗಳಲ್ಲಿ ಶೇ. 86.4ಕ್ಕೆ ಏರಿತು. ಇದು 2021-22ರಲ್ಲಿ ಶೇ. 85.6 ಇತ್ತು. ಪೆಟ್ರೋಲ್ ಮತ್ತು ಡೀಸೆಲ್​ನ ದೇಶೀಯ ಪೂರೈಕೆಯಲ್ಲಿ ಹೆಚ್ಚಳದೊಂದಿಗೆ, ಈ ಅವಲಂಬನೆಯು ಕುಸಿಯುವ ನಿರೀಕ್ಷೆಯಿದೆ. ಈ ಮೂಲಕ ಡಾಲರ್​ಗೆ ಬೇಡಿಕೆ ಮತ್ತು ರೂಪಾಯಿ ಮೌಲ್ಯದ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎಂದು ಅಂದಾಜಿಸಲಾಗಿದೆ.

                ಸರ್ಕಾರದಿಂದ ಕ್ರಮ: ಸರ್ಕಾರವು ತೈಲ ಆಮದಿನ ಮಿತಿ ಹೇರಲು ಸಾಧ್ಯವಿಲ್ಲ. ಇನ್ನು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡುವುದನ್ನು ಮತ್ತು ಅವರ ಹಣ ಹಿಂದಿರುಗಿಸುವುದನ್ನು ತಡೆಯಲು ಹೋದರೆ, ಅದರಿಂದಾಗಿ ಷೇರುಗಳ ಬೆಲೆಗಳಲ್ಲಿ ಮತ್ತಷ್ಟು ಕುಸಿತಕ್ಕೆ ಕಾರಣವಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಸರ್ಕಾರ ಏನು ಮಾಡಬಹುದೋ ಅದನ್ನು ಮಾಡುತ್ತಿದೆ ಎಂಬುದು ತಜ್ಞರ ಅಂಬೋಣ. ಚಿನ್ನದ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿರುವುದು ಒಂದು ಪ್ರಮುಖ ಕ್ರಮ. ಇದರಿಂದ ಚಿನ್ನ ದುಬಾರಿಯಾಗುತ್ತದೆ ಎಂಬುದು ಒಂದು ಅಂದಾಜು. ಹೆಚ್ಚಿನ ಬೆಲೆಯಿಂದಾಗಿ ಸಾಮಾನ್ಯವಾಗಿ ಬೇಡಿಕೆ ತಗುತ್ತದೆ. ಈ ಒಟ್ಟಾರೆ ಪ್ರಕ್ರಿಯೆಯು, ಡಾಲರ್​ಗಳ ಬೇಡಿಕೆ ಮತ್ತು ವ್ಯಾಪಾರ ಕೊರತೆ ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂಬುದುನ ಸರ್ಕಾರದ ಲೆಕ್ಕಾಚಾರ.


ಹಣದುಬ್ಬರಕ್ಕೆ ಆಸ್ಪದ: ದುರ್ಬಲವಾದ ರೂಪಾಯಿಯು ಚಿಲ್ಲರೆ ಹಣದುಬ್ಬರಕ್ಕೆ ಕಾರಣವಾಗುತ್ತದೆ. ಉದಾಹರಣೆಗೆ, ಸರ್ಕಾರ ರೈತರಿಗೆ ರಸಗೊಬ್ಬರ ಸಬ್ಸಿಡಿ ನೀಡುತ್ತದೆ. ಏಪ್ರಿಲ್ ಮತ್ತು ಮೇ ತಿಂಗಳ ಒಟ್ಟು ರಸಗೊಬ್ಬರ ಸಬ್ಸಿಡಿ ಬಿಲ್ -ಠಿ; 10,778 ಕೋಟಿ ಅಥವಾ ಹಿಂದಿನ ವರ್ಷದ ಅವಧಿಗಿಂತ ಶೇ. 58.4ರಷ್ಟು ಹೆಚ್ಚಾಗಿದೆ. ರಸಗೊಬ್ಬರದ ಬೆಲೆ ಏರಿಕೆಯಾಗಿದೆ. ರಸಗೊಬ್ಬರವನ್ನು ದೊಡ್ಡ ಪ್ರಮಾಣದಲ್ಲಿ ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಆಮದು ವಹಿವಾಟಿಗಾಗಿ ಬಳಸಲಾಗುವ ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಕಳೆದುಕೊಂಡಿದ್ದರಿಂದಲೂ ರಸಗೊಬ್ಬರ ಸಬ್ಸಿಡಿ ಬಿಲ್ ಹೆಚ್ಚಳಕ್ಕೆ ಕಾರಣವಾಗಿದೆ. ಈ ಕಾರಣಗಳನ್ನು ಮುಂದಿಟ್ಟುಕೊಂಡು ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವನ್ನು ನಿಧಾನಗೊಳಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.

           ತೈಲ ರಫ್ತಿನ ಮೇಲಿನ ಸುಂಕದಿಂದ 94,800 ಕೋಟಿ ರೂ. ಆದಾಯ: ದೇಶೀಯ ಕಚ್ಚಾ ತೈಲ ಮತ್ತು ಪೆಟ್ರೋಲ್, ಡೀಸೆಲ್ ರಫ್ತಿನ ಮೇಲಿನ ತೆರಿಗೆಯಿಂದ 94,800 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಸರ್ಕಾರಕ್ಕೆ ಬರಲಿದೆ ಎಂದು ಮೂಡಿಸ್ ಇನ್ವೆಸ್ಟರ್ ಸರ್ವೀಸ್ ಹೇಳಿದೆ. ಭಾರತದ ವಿದೇಶಿ ಮೀಸಲು ಸದೃಢವಾಗಿದ್ದು, ರೂಪಾಯಿ ದುರ್ಬಲವಾಗುತ್ತಿದ್ದರೂ ಸಾಲಗಳ ಮರುಪಾವತಿಯ ವಿಷಯದಲ್ಲಿ ಆತಂಕ ಉಂಟಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಹಣದುಬ್ಬರದ ತಾಪ ಇಳಿಸಲು ಕಳೆದ ಮೇ ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಕೆಯಿಂದ ಸರ್ಕಾರಕ್ಕೆ ಸುಮಾರು ಒಂದು ಲಕ್ಷ ಕೋಟಿ ರೂಪಾಯಿ ವರಮಾನ ಖೋತಾ ಆಗಿತ್ತು. ಈಗ ಪೆಟ್ರೋಲ್ ಮತ್ತು ಡೀಸೆಲ್ ರಫ್ತಿನ ಮೇಲಿನ ತೆರಿಗೆಯಿಂದ ಇದು ಸರಿದೂಗಲಿದೆ.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries