ನವದೆಹಲಿ: ಶಿವಸೇನೆಯ ಉದ್ಧವ್ ಠಾಕ್ರೆ ಬಣ ತಮ್ಮ ವಿರುದ್ಧದ ಅನರ್ಹತೆ ಪ್ರಕ್ರಿಯೆಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವಾಗ ಹೊಸ ಸರ್ಕಾರ ರಚನೆಗೆ ಅವಕಾಶ ನೀಡಬಾರದಿತ್ತು ಎಂದು ಹೇಳಿದೆ.
ಉದ್ಧವ್ ಠಾಕ್ರೆ ಬಣದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ಪಕ್ಷ ನಾಮನಿರ್ದೇಶನ ಮಾಡಿದ ಅಧಿಕೃತ ವಿಪ್ ಹೊರತುಪಡಿಸಿ ವಿಧಾನಸಭಾಧ್ಯಕ್ಷರು ಬೇರೆ ವಿಪ್ ಅನ್ನು ಪರಿಗಣಿಸಿದ್ದಾರೆ. ಸ್ಪೀಕರ್ ಅವರ ಆಯ್ಕೆ ಸಹ ಸರಿಯಲ್ಲ. ಏಕೆಂದರೆ ಅನರ್ಹಗೊಳಿಸಬೇಕೆಂದು ತಮ್ಮ ಕಕ್ಷಿದಾರರು ಕೋರಿರುವ ಶಾಸಕರಿಂದ ಅವರು ಚುನಾಯಿತರಾಗಿದ್ದಾರೆ. ಶಾಸಕರ ಅನರ್ಹತೆ ಅರ್ಜಿ ಇನ್ನೂ ಬಾಕಿ ಇದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪೀಠಕ್ಕೆ ತಿಳಿಸಿದರು.
"ಜನರ ತೀರ್ಪಿಗೆ ಬೆಲೆ ಇಲ್ಲವೇ? ಸಂವಿಧಾನದ 10ನೇ ವಿಧಿಯನ್ನು ತಿರುಚಲಾಗಿದೆ ಮತ್ತು ಪಕ್ಷಾಂತರವನ್ನು ಪ್ರಚೋದಿಸಲು ಅದನ್ನು ಬಳಸಲಾಗಿದೆ" ಎಂದು ಕಪಿಲ್ ಸಿಬಲ್ ವಾದಿಸಿದರು.
ಮುಖ್ಯಮಂತ್ರಿ ಏಕನಾಥ್ ಶಿಂಧೆ ಪರ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು, ಪ್ರಜಾಪ್ರಭುತ್ವದಲ್ಲಿ ಜನರು ಗುಂಪುಗೂಡಿ ಕ್ಷಮಿಸಿ ನೀವು ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಪ್ರಧಾನಿಗೆ ಹೇಳಬಹುದು ಎಂದರು.
ನಾಯಕರೊಬ್ಬರು ಪಕ್ಷದೊಳಗೆ ಶಾಸಕರ ಬೆಂಬಲ ಪಡೆದು ಪಕ್ಷದಲ್ಲೇ ಉಳಿದು ತಮ್ಮ ನಾಯಕರನ್ನು ಪ್ರಶ್ನಿಸಿದರೆ ಅದು ಪಕ್ಷಾಂತರವಲ್ಲ ಎಂದು ಸಾಳ್ವೆ ವಾದಿಸಿದರು.
ವಾದ-ಪ್ರತಿವಾದ ಆಲಿಸಿದ ಕೋರ್ಟ್, ಈ ಬಗ್ಗೆ ಜುಲೈ 27ರೊಳಗೆ ಅಫಿಡವಿಟ್ ಸಲ್ಲಿಸುವಂತೆ ಶಿಂಧೆ ಬಣಕ್ಕೆ ಸೂಚಿಸಿ ಪ್ರಕರಣದ ವಿಚಾರಣೆಯನ್ನು ಆಗಸ್ಚ್ 1ಕ್ಕೆ ಮುಂದೂಡಿದೆ.