ಪಾಟ್ನಾ: ಉಗ್ರಗಾಮಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಜೊತೆ ನಂಟು ಹೊಂದಿರುವ ಆರೋಪದಡಿ ಜಾರ್ಖಂಡ್ ನ ನಿವೃತ್ತ ಪೊಲೀಸ್ ಅಧಿಕಾರಿ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.
ಈ ಮೂಲಕ ಬಿಹಾರ ಪೊಲೀಸರು ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಸಂಭಾವ್ಯ ಭಯೋತ್ಪಾದಕ ಘಟಕ ಭೇದಿಸಿದ್ದಾರೆ. ಬುಧವಾರ ತಡರಾತ್ರಿ ಪಾಟ್ನಾದ ಫುಲ್ವಾರಿ ಷರೀಫ್ ಪ್ರದೇಶದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
ಬಂಧಿತರನ್ನು ಜಾರ್ಖಂಡ್ ನ ನಿವೃತ್ತ ಪೊಲೀಸ್ ಅಧಿಕಾರಿ ಮೊಹಮ್ಮದ್ ಜಲಾವುದ್ದೀನ್ ಮತ್ತು ಅಥರ್ ಪರ್ವೇಜ್ ಎಂದು ಗುರುತಿಸಲಾಗಿದೆ. ಅವರು ಪಿಎಫ್ಐಯೊಂದಿಗೆ ಸಂಪರ್ಕ ಹೊಂದಿದ್ದಾರೆ. ಜಲಾವುದ್ದೀನ್ ಈ ಹಿಂದೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ(ಸಿಮಿ)ದೊಂದಿಗೆ ಸಂಬಂಧ ಹೊಂದಿದ್ದರು ಎಂದು ಫುಲ್ವಾರಿ ಷರೀಫ್ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ(ಎಎಸ್ ಪಿ) ಮನೀಶ್ ಕುಮಾರ್ ಹೇಳಿದ್ದಾರೆ.
ಪೊಲೀಸರ ಪ್ರಕಾರ, ಮಾಡ್ಯೂಲ್ 2047ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲು ಪಿಎಫ್ಐ ಯೋಜಿಸುತ್ತಿದೆ. ಜುಲೈ 12ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸುವ ಸಂಚು ಕೂಡ ಇತ್ತು.
ಬಂಧಿತರು ಸ್ಥಳೀಯರಿಗೆ ಕತ್ತಿ ಮತ್ತು ಚಾಕುಗಳನ್ನು ಹೇಗೆ ಬಳಸಬೇಕೆಂದು ಕಲಿಸುತ್ತಿದ್ದರು ಮತ್ತು ಕೋಮುಗಲಭೆಗೆ ಪ್ರಚೋದನೆ ನೀಡುತ್ತಿದ್ದರು. ಇತರ ರಾಜ್ಯಗಳ ಜನರು ಪಾಟ್ನಾದಲ್ಲಿ ಅವರನ್ನು ಭೇಟಿ ಮಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಭೇಟಿಮಾಡಲು ಬರುವವರು ಹೋಟೆಲ್ ನಲ್ಲಿ ತಂಗುವ ವೇಳೆ ಹೆಸರನ್ನು ಬದಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ.