ಹೈದರಾಬಾದ್: ದೇಶವನ್ನು ತುಷ್ಟೀಕರಣದಿಂದ ಭರವಸೆಗಳ ಈಡೇರಿಕೆ ಯತ್ತ ಒಯ್ಯಲು ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಎಲ್ಲ ಸಮುದಾಯವನ್ನು ತಲುಪಲು ವಿಶೇಷವಾಗಿ ಅವಕಾಶ ವಂಚಿತ ವರ್ಗವನ್ನು ಮುಟ್ಟಲು ಸ್ನೇಹ ಯಾತ್ರೆ ಕೈಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕರೆ ನೀಡಿದರು.
ರಾಷ್ಟ್ರೀಯ ನಾಯಕರ ಜತೆ ಬೊಮ್ಮಾಯಿ ಚರ್ಚೆ: ಹೈದರಾಬಾದ್ನಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗಿಯಾಗಿದ್ದ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ, ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಹಲವು ರಾಷ್ಟ್ರೀಯ ನಾಯಕರ ಜತೆ ಚರ್ಚೆ ನಡೆಸಿದರು.
ಬುಡಕಟ್ಟು ಸಮುದಾಯದ ನಾಯಕಿ ದ್ರೌಪದಿ ಮುಮು ರಾಷ್ಟ್ರಪತಿ ಚುನಾವಣೆಯ ಎನ್ಡಿಎ ಅಭ್ಯರ್ಥಿಯಾಗಿರುವುದು ಭಾರತದ ಹೆಮ್ಮೆ. ಇದೊಂದು ಐತಿಹಾಸಿಕ ವಿದ್ಯಮಾನ
| ನರೇಂದ್ರ ಮೋದಿ ಪ್ರಧಾನಿ
ಮುಂದಿನ 30-40 ವರ್ಷ ಬಿಜೆಪಿ ಯುಗ: ದೇಶದಲ್ಲಿ ಮುಂದಿನ 30ರಿಂದ 40 ವರ್ಷ ಬಿಜೆಪಿ ಯುಗವಾಗಿರುತ್ತದೆ ಮತ್ತು ಭಾರತ ವಿಶ್ವಗುರುವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದರು. ತೆಲಂಗಾಣ ಮತ್ತು ಬಂಗಾಳದಲ್ಲಿ ಕುಟುಂಬ ರಾಜಕಾರಣವನ್ನು ಬಿಜೆಪಿ ಕೊನೆ ಗೊಳಿಸಲಿದೆ. ಆಂಧ್ರಪ್ರದೇಶ, ತಮಿಳುನಾಡು ಮತ್ತು ಒಡಿಶಾದಲ್ಲಿ ಕೂಡ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಷಾ ವಿಶ್ವಾಸ ವ್ಯಕ್ತಪಡಿಸಿದರು. ಸುದೀರ್ಘ ಕಾಲ ದೇಶದ ಸಂಕಷ್ಟಗಳಿಗೆ ವಂಶ ರಾಜಕಾರಣ, ಜಾತೀಯತೆ ಮತ್ತು ತುಷ್ಟೀಕರಣ ರಾಜಕಾರಣಗಳೇ ಕಾರಣ ಎಂದು ಅಭಿಪ್ರಾಯ ಪಟ್ಟ ಅವರು, ಈಶಾನ್ಯ ರಾಜ್ಯಗಳ ಸಮಸ್ಯೆಗಳನ್ನು 2024ರೊಳಗೆ ಬಗೆಹರಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಭಾಗ್ಯನಗರ ಎಂದ ಮೋದಿ: ತೆಲಂಗಾಣ ರಾಜಧಾನಿ ಹೈದರಾಬಾದ್ ಅನ್ನು ಭಾಗ್ಯನಗರ ಎಂದು ಪ್ರಧಾನಿ ಮೋದಿ ಸಂಬೋಧಿಸಿದ್ದು, ಇದು ಹೆಸರು ಬದಲಾವಣೆಯ ಸೂಚನೆಯಾಗಿರಬಹುದೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. 'ಹೈದರಾಬಾದ್ ನಗರವೇ ಭಾಗ್ಯನಗರವಾಗಿದ್ದು ನಮ್ಮೆಲ್ಲರಿಗೆ ಮಹತ್ವದ್ದಾಗಿದೆ. ಸರ್ದಾರ್ ಪಟೇಲ್ ಏಕೀಕೃತ ಭಾರತಕ್ಕೆ ಅಸ್ತಿಭಾರ ಹಾಕಿದ್ದು ಈ ನಗರದಲ್ಲೆ. ಅದನ್ನು ಮುಂದುವರಿಸಿಕೊಂಡು ಹೋಗುವ ಹೊಣೆ ಬಿಜೆಪಿ ಮೇಲಿದೆ' ಎಂದು ಮೋದಿ ಹೇಳಿದರು ಎಂದು ಪಕ್ಷದ ನಾಯಕ ರವಿ ಶಂಕರ್ ಪ್ರಸಾದ್ ತಿಳಿಸಿದ್ದಾರೆ. ಹೈದರಾಬಾದನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡುವಂತೆ ಆರ್ಎಸ್ಎಸ್ ಮತ್ತು ಹಲವು ಬಿಜೆಪಿ ನಾಯಕರು ಆಗ್ರಹಿಸುತ್ತಾ ಬಂದಿದ್ದಾರೆ.
ಜೈ ಜೈ ಕೆಸಿಆರ್ ಬಲೂನ್ ಹಾರಾಟ: ಕೇಂದ್ರದೊಂದಿಗೆ ಸದಾ ತಿಕ್ಕಾಟ ನಡೆಸುತ್ತಿರುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್, ರಾಜ್ಯಕ್ಕೆ ಪ್ರಧಾನಿ ಬಂದಾಗಲೂ ಅವರನ್ನು ಬರಮಾಡಿಕೊಳ್ಳಲು ಹೋಗದೆ ವಿವಾದ ಸೃಷ್ಟಿಸಿದ್ದಾರೆ. ಇಷ್ಟು ಮಾತ್ರವಲ್ಲದೆ, ಮೋದಿ ಭಾಗವಹಿಸಿದ್ದ ಸಿಕಂದರಾಬಾದ್ನ ಪರೇಡ್ ಗ್ರೌಂಡ್ಸ್ ಮೇಲೆ ಭಾನುವಾರ 'ಜೈ ಜೈ ಕೆಸಿಆರ್' ಎಂಬ ಬರಹವುಳ್ಳ ಬಲೂನುಗಳ ಹಾರಾಟ ಕಂಡು ಬಂತು.
ತೆಲಂಗಾಣದ ವಿಶೇಷ ಖಾದ್ಯ ಸವಿದ ನಾಯಕರು: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ತೆಲಂಗಾಣದ ವಿಶೇಷ ಖಾದ್ಯಗಳ ಔತಣವನ್ನು ಅತಿಥೇಯ ಬಿಜೆಪಿ ರಾಜ್ಯ ಘಟಕ ಉಣಬಡಿಸಿತು. ಮಾವಿನ ದಾಲ್, ಹೈದರಾಬಾದ್ ಬಿರ್ಯಾನಿ ಸೇರಿದಂತೆ 50 ಬಗೆಯ ಖಾದ್ಯಗಳನ್ನು ನೀಡಲಾಯಿತು.