ಪಾಲಕ್ಕಾಡ್: ಬಿಂದು ಅಮ್ಮಿಣಿ ಜೊತೆ ಶಬರಿಮಲೆ ಮಹಿಳಾ ಪ್ರವೇಶ ಸಂದರ್ಭ ಭಾಗವಹಿಸಿದ್ದ ಕನಕದುರ್ಗಾ ಮರು ವಿವಾಹವಾಗಿದ್ದಾರೆ. ಪಾಲಕ್ಕಾಡ್ ಕಲೆಕ್ಟರ್ ಒತ್ತೆಯಾಳು ಪ್ರಕರಣದ ಆರೋಪಿ ವಲಯೋಡಿ ಶಿವನ್ ಕುಟ್ಟಿ ಎಂಬಾತನೇ ವರ. ವಿಶೇಷ ವಿವಾಹ ಕಾಯಿದೆಯ ಪ್ರಕಾರ, ಪಾಲಕ್ಕಾಡ್‍ನ ಚಿತ್ತೂರು ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನಡೆಯಿತು.
ವಿವಾಹದ ಬಳಿಕ ಇಬ್ಬರೂ ಪರಸ್ಪರ ಒಡನಾಡಿಗಳಾಗಿ ಒಟ್ಟಿಗೆ ವಾಸಿಸುವುದಾಗಿ ಘೋಷಿಸಿರುವರು. ಕನಕದುರ್ಗಾ ಅವರಿಗೆ ಇದು ಎರಡನೇ ವಿವಾಹ. ಶಬರಿಮಲೆ ಹತ್ತಿದ ನಂತರ ಕನಕದುರ್ಗೆಯ ಮೊದಲ ವಿವಾಹ ಮುರಿದುಬಿದ್ದಿತ್ತು. ಶಬರಿಮಲೆ ಪ್ರವೇಶಿಸಿದ ನಂತರ ಎಲ್ಲರೂ ಕೈಬಿಟ್ಟಿದ್ದಾರೆ ಎಂದು ಕನಕದುರ್ಗ ಬಿಬಿಸಿ ತಮಿಳಿಗೆ ನೀಡಿದ ಸಂದರ್ಶನದಲ್ಲಿ ಅಳಲು ತೋಡಿಕೊಂಡಿದ್ದಳು.
ಶಬರಿಮಲೆಯಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ಉಲ್ಲಂಘಿಸಿದ ಕನಕದುರ್ಗೆಗೆ ಪೆರಿಂತಲ್ಮಣ್ಣದ ಆಕೆಯ ಮನೆಗೆ ಪ್ರವೇಶಕ್ಕೆ ನ್ಯಾಯಾಲಯ ಅನುಮತಿ ನೀಡಿದ ಬಳಿಕ ಅವಳÀ ಪತಿ ಕೃಷ್ಣನುಣ್ಣಿ ಹಾಗೂ ಅತ್ತೆ ಸುಮತಿಯಮ್ಮ ಸ್ವಂತ ಮನೆಯಿಂದ ಬಾಡಿಗೆ ಮನೆಗೆ ತೆರಳಿದ್ದರು.
ಕನಕದುರ್ಗ ಮತ್ತು ಬಿಂದು ಶಬರಿಮಲೆ ಪ್ರವೇಶಿಸಲು ಮತ್ತು ಧಾರ್ಮಿಕ ವಿಧಿ ಉಲ್ಲಂಘನೆ ಮಾಡಲು ಸಿಪಿಎಂ ಸಹಾಯ ಮಾಡಿದೆ ಎಂದು ಸಂಬಂಧಿಕರು ಆರೋಪಿಸಿದ್ದರು. ಶಬರಿಮಲೆಗೆ ಯುವತಿಯರ ಪ್ರವೇಶದ ನಂತರ ಕನಕದುರ್ಗ ಸಾರ್ವಜನಿಕರಿಂದ ಸಾಕಷ್ಟು ಪ್ರತಿಭಟನೆ ಎದುರಿಸಬೇಕಾಯಿತು. ಅಂದು ಕನಕದುರ್ಗಾ ಅವರ ಮನೆ ಮುಂದೆ ನಾಮಜಪ ಪ್ರತಿಭಟನೆ ಕೂಡ ನಡೆದಿತ್ತು. ಕನಕದುರ್ಗಾ ಅವರ ಸಹೋದರ ಆಚಾರ ಉಲ್ಲಂಘನೆಗಾಗಿ ಹಿಂದೂ ಸಮಾಜದ ಕ್ಷಮೆ ಯಾಚಿಸಿದ್ದರು.