ಕಾಸರಗೋಡು: ಜಿಲ್ಲೆಯಲ್ಲಿ ಅತಿಯಾದ ಮಳೆ ಮುಂದುವರಿಯುತ್ತಿದ್ದು, ಜುಲೈ 8 ರಂದು ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‍ಚಂದ್ ಆದೇಶ ಹೊರಡಿಸಿದ್ದಾರೆ. ಮುಂದಿನ ನಾಲ್ಕು ದಿನಗಳ ಕಾಲ ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದ್ದು, ಕಾಸರಗೋಡು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಅಂಗನವಾಡಿಗಳು, ಕೇಂದ್ರೀಯ ವಿದ್ಯಾಲಯಗಳು, ಸಿಬಿಎಸ್‍ಇ, ಸಿಎಸ್‍ಇ ಶಾಲೆಗಳು ಮತ್ತು ವೃತ್ತಿಪರ ಕಾಲೇಜುಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಗುರುವಾರ ಬಿರುಸಿನ ಮಳೆ ಬಗ್ಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದರೂ, ಶಾಲೆಗಳಿಗೆ ರಜೆ ನೀಡದಿರುವುದರಿಂದ ಬಹುತೇಕ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿತ್ತು.
ಜಿಲ್ಲೆಯ ವೆಳ್ಳರಿಕುಂಡ್ ತಾಲೂಕಿನಲ್ಲಿ ಗುರುವಾರ ಅತಿ ಹೆಚ್ಚು (119.5 ಮಿಮೀ) ಮಳೆಯಾಗಿದ್ದು, ಇತರ ತಾಲೂಕುಗಳಲ್ಲೂ ಬಿರುಸಿನ ಮಳೆಯಾಗಿದೆ. ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭೂಕುಸಿತ. ರಸ್ತೆಗಳ ಕುಸಿತ ಜತೆಗೆ ಹೊಳೆಗಳು ಉಕ್ಕಿ ಹರಿಯುತ್ತಿದ್ದು, ತಗ್ಗು ಪ್ರದೇಶ ಜಲಾವೃತಗೊಳ್ಳಲು ಕಾರಣವಾಗಿದೆ. ಬಹುತೇಕ ಕಡೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಪೂರ್ವ ನಿಗದಿತ ಪರೀಕ್ಷೆಗಳು ಮತ್ತು ಸಂದರ್ಶನಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮಳೆ ಹಿನ್ನೆಲೆಯಲ್ಲಿ ರಜೆಯಲ್ಲಿ ಕಳೆದುಹೋದ ಅಧ್ಯಯನ ಸಮಯವನ್ನು ಸರಿಹೊಂದಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಮನೆ ಕುಸಿತ:
ಬಿರುಸಿನ ಮಳೆಗೆ ಮಂಜೇಶ್ವರ ತಾಲೂಕಿನ ವಿವಿಧೆಡೆ ಅಪಾರ ಹಾನಿಯಾಗಿದೆ. ಉಪ್ಪಳ ಹಿದಾಯತ್‍ನಗರದಲ್ಲಿ ರುಕಿಯಾ ಎಂಬವರ ಮನೆ ಮೇಲೆ ಆವರಣ ಗೋಡೆ ಕುಸಿದು ಬಿದ್ದ ಪರಿಣಾಮ ಮನೆ ಸಂಪೂರ್ಣ ಹಾನಿಗೀಡಾಗಿದೆ.
ಚಿತ್ರ: ಉಪ್ಪಳ ಹಿದಾಯತ್ ನಗರದ ರುಕಿಯಾ ಅವರ ಮನೆಯ ಆವರಣಗೋಡೆ ಕುಸಿದು ಬಿದ್ದ ಪರಿಣಾಮ ಉಂಟಾದ ಹಾನಿ