ತಿರುವನಂತಪುರಂ: ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪರಿಶಿಷ್ಟ ಪಂಗಡಕ್ಕೆ ಸಂಬಂಧಿಸಿದಂತೆ ನಿಂದನಾತ್ಮಕ ಪೋಸ್ಟ್ ಗಳನ್ನು ಮಾಡಿದ ಆರೋಪ ಹೊತ್ತಿದ್ದ ಯುಟ್ಯೂಬರ್ ಒಬ್ಬರಿಗೆ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಈಗಿನ ಡಿಜಿಟಲ್ ಯುಗದಲ್ಲಿ ಒಬ್ಬ ವ್ಯಕ್ತಿಯ ಉಪಸ್ಥಿತಿಯು ಆತನ ಡಿಜಿಟಲ್ ಉಪಸ್ಥಿತಿಯನ್ನೂ ಒಳಗೊಂಡಿದೆ ಎಂದು ಹೇಳಿದೆಯಲ್ಲದೆ ಪರಿಶಿಷ್ಟ ಜಾತಿ/ಪಂಗಡಗಳ ದೌರ್ಜನ್ಯ ತಡೆ ಕಾಯಿದೆಯಡಿಯ ಪ್ರಕರಣಗಳನ್ನು ಸಾಮಾಜಿಕ ಜಾಲತಾಣದಲ್ಲಿನ ವೀಡಿಯೋಗಳಿಗೆ ಸಂಬಂಧಿಸಿದಂತೆಯೂ ದಾಖಲಿಸಬಹುದು ಎಂದು ಹೇಳಿದೆ.
ಆನ್‍ಲೈನ್ ಸುದ್ದಿ ತಾಣವಾಗಿರುವ 'ಟ್ರೂ ಟಿವಿ' ಇದರ ಆಡಳಿತ ನಿರ್ದೇಶಕರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನಿನ ವಿಚಾರಣೆ ಸಂದರ್ಭ ನ್ಯಾಯಾಲಯ ಮೇಲಿನಂತೆ ಆದೇಶ ನೀಡಿದೆ.
ಪರಿಶಿಷ್ಟ ಜಾತಿಯ ಮಹಿಳೆಯೊಬ್ಬರು ಲೈಂಗಿಕ ಹಲ್ಲೆ ಆರೋಪ ಮಾಡಿದ ಕಾರಣ ತನ್ನ ಸ್ನೇಹಿತ ಹಾಗೂ ಸಹೋದ್ಯೋಗಿಯ ಬಂಧನವಾಗಿದ್ದರಿಂದ ನೊಂದ ಅರ್ಜಿದಾರರು ಆ ಮಹಿಳೆಯ ಪತಿ ಮತ್ತು ಮಾವನ ಜೊತೆಗೆ ಸಂದರ್ಶನ ನಡೆಸುವ ವೇಳೆ ಮಹಿಳೆಯ ಜಾತಿ ಗುರುತಿನ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದರೆನ್ನಲಾಗಿದ್ದು ಇದು ನಂತರ ಯುಟ್ಯೂಬ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗಿತ್ತು.
ಇದರಿಂದ ಅರ್ಜಿದಾರರ ವಿರುದ್ಧ ಐಪಿಸಿ ಹಾಗೂ ಐಟಿ ಕಾಯಿದೆಯ ವಿವಿಧ ಸೆಕ್ಷನ್‍ಗಳನ್ವಯ ಹಾಗೂ ಪರಿಶಿಷ್ಟ ಜಾತಿ ಪಂಗಡಗಳ ದೌರ್ಜನ್ಯ ತಡೆ ಕಾಯಿದೆಯ ಕೆಲವೊಂದು ಸೆಕ್ಷನ್‍ಗಳಡಿಯಲ್ಲೂ ಪ್ರಕರಣ ದಾಖಲಾಗಿತ್ತು.
ಅರ್ಜಿದಾರರ ಪರ ವಾದಿಸಿದ ವಕೀಲ ಬಾಬು ಎಸ್ ನಾಯರ್, ನಿಂದನೆಯನ್ನು ಸಾರ್ವಜನಿಕವಾಗಿ ಹಾಗೂ ಸಂತ್ರಸ್ತರ ಉಪಸ್ಥಿತಿಯಲ್ಲಿ ಮಾಡಿದರೆ ಮಾತ್ರ ಈ ಕಾಯಿದೆಯಡಿ ಅಪರಾಧವಾಗುತ್ತದೆ ಎಂದು ಹೇಳಿದರಲ್ಲದೆ ಈ ಸಂದರ್ಭ ಸಂತ್ರಸ್ತೆ ಅಲ್ಲಿ ಇರಲಿಲ್ಲ ಎಂಬ ಅಂಶವನ್ನೂ ಎತ್ತಿ ಹೇಳಿದರು.
ಆದರೆ ಸಂತ್ರಸ್ತೆ ಪರ ವಕೀಲೆ ಕೆ ನಂದಿನಿ ತಮ್ಮ ವಾದ ಮಂಡನೆ ವೇಳೆ ಈ ನಿಂದನೆಯನ್ನು ಸಾರ್ವಜನಿಕ ವೇದಿಕೆಯಲ್ಲಿ ಮಾಡಲಾಗಿದೆ ಎಂದು ಹೇಳಿದರು.
ಇತ್ತಂಡಗಳ ವಾದ ಆಲಿಸಿದ ನ್ಯಾಯಾಲಯವು, ಇ ಕೃಷ್ಣನ್ ನಯನಾರ್ ಪ್ರಕರಣವನ್ನು ಉಲ್ಲೇಖಿಸಿ ಒಬ್ಬ ವ್ಯಕ್ತಿಯ ಉಪಸ್ಥಿತಿಯು ಆತನ ಡಿಜಿಟಲ್ ಹಾಗೂ ಆನ್‍ಲೈನ್ ಉಪಸ್ಥಿತಿಯನ್ನೂ ಒಳಗೊಂಡಿರುವುದರಿಂದ ಈ ಪ್ರಕರಣದಲ್ಲಿ ಪರಿಶಿಷ್ಟ ಜಾತಿ/ಪಂಗಡಗಳ ಕಾಯಿದೆಯೂ ಅನ್ವಯವಾಗುತ್ತದೆ ಎಂದು ಹೇಳಿದೆ.