ರಿಯಾಸಿ: ಶಸ್ತ್ರ ಸಜ್ಜಿತ ಇಬ್ಬರು ಉಗ್ರರನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ನಡೆದಿತ್ತು. ಲಷ್ಕರ್-ಎ-ತಯಬಾ (ಎಲ್‌ಇಟಿ) ಸಂಘಟನೆಯ ಇಬ್ಬರು ಉಗ್ರರಲ್ಲಿ ಓರ್ವ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಉಗ್ರನಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದರು.
ರಜೌರಿಯ ನಿವಾಸಿಯಾಗಿದ್ದ ಎಲ್‌ಇಟಿ ಕಮಾಂಡರ್ ತಾಲಿಬ್ ಹುಸೇನ್ ಮತ್ತು ಫೈಜಲ್ ಅಹ್ಮದ್ ಬಂಧಿತ ಉಗ್ರನಾಗಿದ್ದು, ಬಂಧಿತರಿಂದ ಎಕೆ ಅಸಾಲ್ಟ್ ರೈಫಲ್ಸ್, 7 ಗ್ರೆನೇಡ್ಗಳು, ಒಂದು ಪಿಸ್ತೂಲ್ ಅನ್ನು ವಶಕ್ಕೆ ಪಡೆಯಲಾಗಿತ್ತು. ಈಗ ಈ ಉಗ್ರರ ಜಾಡು ಹಿಡಿದು ಹೋದ ಪೊಲೀಸರಿಗೆ ಶಾಕಿಂಗ್ ಸತ್ಯವೊಂದು ಗೊತ್ತಾಗಿದೆ. ಅದೇನೆಂದರೆ, ಈ ಇಬ್ಬರು ಉಗ್ರರ ಪೈಕಿ ತಾಲಿಬ್ ಹುಸೇನ್ ಕೆಲ ದಿನಗಳವರೆಗೂ ಬಿಜೆಪಿ ನಾಯಕರಾಗಿದ್ದ ಮತ್ತು ಜಮ್ಮು ಪ್ರಾಂತ್ಯದ ಅಲ್ಪಸಂಖ್ಯಾತ ಮೋರ್ಚಾ ಐಟಿ ಸೆಲ್ ನಿರ್ವಹಿಸುತ್ತಿದ್ದ ಎಂಬುದು!
ಆನ್‌ಲೈನ್ ಸದಸ್ಯತ್ವದ ಮೂಲಕ ಬಿಜೆಪಿ ಸೇರಿಕೊಂಡಿದ್ದ ಈತ ಅಲ್ಲಿ ಮುಖ್ಯಸ್ಥನಾಗಿ ಬಿಜೆಪಿ ನಾಯಕರನ್ನು ಕೊಲ್ಲುವ ಸಂಚು ರೂಪಿಸಿದ್ದನೇ ಎನ್ನುವ ಸಂಶಯ ಪೊಲೀಸರಿಗೆ ಬಲವಾಗಿದೆ. ಯಾವುದೇ ಹಿನ್ನೆಲೆಯ ಪರಿಶೀಲನೆಯಿಲ್ಲದೆ ಜನರು ಪಕ್ಷಕ್ಕೆ ಸೇರಲು ಅನುವು ಮಾಡಿಕೊಡುವ ಆನ್‌ಲೈನ್ ಸದಸ್ಯತ್ವ ವ್ಯವಸ್ಥೆಯನ್ನು ಬಿಜೆಪಿ ಕಾರ್ಯಕರ್ತರು ದೂಷಿಸಿದ್ದಾರೆ.
ಈತ ರಜೌರಿ ಜಿಲ್ಲೆಯ ನಿವಾಸಿ ಮತ್ತು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಐಇಡಿ ಸ್ಫೋಟಗಳ ಮಾಸ್ಟರ್ ಮೈಂಡ್ ಕೂಡ ಹೌದು. ತಾಲಿಬ್ ಬಿಜೆಪಿಯ ಸದಸ್ಯನಾಗಿದ್ದನಂತೆ. ಎರಡು ತಿಂಗಳ ಹಿಂದೆ ಜಮ್ಮು ಪ್ರಾಂತ್ಯದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಐಟಿ ಮತ್ತು ಸಾಮಾಜಿಕ ಮಾಧ್ಯಮ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದನಂತೆ. ವರದಿಗಳ ಪ್ರಕಾರ, ತಾಲಿಬ್ ನ್ಯೂಸ್ ಪೋರ್ಟಲ್ ಅನ್ನು ಸಹ ನಡೆಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಜೆಪಿ ಕಳೆದ ಮೇ 9 ರಂದು ಜಮ್ಮು ಪ್ರಾಂತ್ಯದ ಪಕ್ಷದ ಐಟಿ ಮತ್ತು ಸಾಮಾಜಿಕ ಮಾಧ್ಯಮದ ಉಸ್ತುವಾರಿಯಾಗಿ ಹುಸೇನ್ ಶಾನನ್ನು ನೇಮಿಸಿತ್ತು ಎಂದು ತಿಳಿದುಬಂದಿದೆ.