HEALTH TIPS

ಪುಟ್ಟ ಮಕ್ಕಳ ಹಲ್ಲನ್ನು ಕಾಳಜಿ ಮಾಡುವುದು ಹೇಗೆ? ಹಲ್ಲುಜ್ಜುವುದನ್ನು ಆರಂಭಿಸುವುದು ಹೇಗೆ?

ಮಗು ಜನಿಸಿದ ಆರು ತಿಂಗಳ ಒಳಗೆ ಕೆಲವು ಮಕ್ಕಳಲ್ಲಿ ಒಂಭತ್ತು ತಿಂಗಳ ಒಳಗೆ ಮೊದಲ ಹಲ್ಲು ಬೆಳೆಯಲು ಆರಂಭಿಸುತ್ತೆ. ಎರಡೂವರೆ ಮೂರುವರ್ಷದ ಒಳಗೆ ಇಪ್ಪತ್ತು ಹಲ್ಲುಗಳೂ ಕಾಣಿಸಿಕೊಳ್ಳುತ್ತದೆ. ಮಗುವಿನಲ್ಲಿ ಮೊದಲ ಹಲ್ಲು ಕಾಣಿಸಿಕೊಂಡ ನಂತರದಿಂದ ಹಲ್ಲಿನ ಬಗ್ಗೆ ಅರೈಕೆಯನ್ನು ಮಾಡಬೇಕಾಗುತ್ತದೆ. ಎಷ್ಟೋ ತಾಯಂದಿರು ಇನ್ನೂ ಎರಡೇ ಹಲ್ಲು ಬಂದಿರೋದು, ಈಗಲೇ ಹಲ್ಲಿನ ಬಗ್ಗೆ ಹೇಗೆ ಕೇರ್‌ ತೆಗೆದುಕೊಳ್ಳುವುದು ಹೇಗೆ ಎನ್ನುವುದು ತಾಯಂದಿರ ಪ್ರಶ್ನೆಯಾದರೆ ಈ ಮಾಹಿತಿ ತಪ್ಪದೇ ಓದಿ.

ಮಕ್ಕಳಲ್ಲಿ ಹಲ್ಲಿನ ಬೆಳವಣಿಗೆ

ಮೊದಲೇ ಹೇಳಿದಂತೆ ಮಕ್ಕಳಲ್ಲಿ ಸಾಮಾನ್ಯವಾಗಿ ದಂತ ಬೆಳೆಯಲಾರಂಭಿಸುತ್ತದೆ. ಮೂರು ವರ್ಷವಾಗುವಾಗ ಎಲ್ಲಾ ಪ್ರಾಥಮಿಕ ಹಲ್ಲುಗಳನ್ನು ಪಡೆಯುತ್ತದೆ. ಇದನ್ನು ಹಾಲು ಹಲ್ಲು (ಮಿಲ್ಕೀ ಟೀತ್‌) ಅಂತಾನೂ ಕರೆಯುತ್ತಾರೆ. ಮಗುವಿಗೆ ಐದು ವರ್ಷವಾದ ನಂತರದಲ್ಲಿ ಪ್ರಾಥಮಿಕ ಹಲ್ಲುಗಳು ಹೋಗಿ ಶಾಶ್ವತ ಹಲ್ಲುಗಳು ಮೂಡುತ್ತವೆ. ಈ ಪ್ರಾಥಮಿಕ ಹಲ್ಲುಗಳು ಮಗುವಿನ ಮುಖಕ್ಕೆ ಆಕಾರವನ್ನು ನೀಡುತ್ತದೆ. ಶಾಶ್ವತ ಹಲ್ಲುಗಳು ಸರಿಯಾದ ಜಾಗದಲ್ಲಿ ಮೂಡಲು ಸಹಾಯ ಮಾಡುತ್ತದೆ. ಮಗುವಿಗೆ ಮಾತು ಕಲಿಯಲು, ಆಹಾರ ಸೇವಿಸಲು ಈ ಪ್ರಾಥಮಿಕ ಹಲ್ಲುಗಳು ಅತೀ ಮುಖ್ಯ. ಹಾಗಾಗಿ ಈ ಹಲ್ಲುಗಳ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ.

ಮಗುವಿನ ಪ್ರಾಥಮಿಕ ಹಲ್ಲಿನ ಕಾಳಜಿ ಯಾಕೆ ಅವಶ್ಯ

ಮಗುವಿನ ಪ್ರಾಥಮಿಕ ಹಲ್ಲಿನ ಬಗ್ಗೆ ಯಾಕೆ ಅಷ್ಟೊಂದು ಕಾಳಜಿ ವಹಿಸಬೇಕು ಎಂದರೆ, ಈ ಹಾಲುಹಲ್ಲಿನ ದಂತಕವಚದ ಪದರವು ಶಾಶ್ವತ ದಂತದ ಕವಚಕ್ಕಿಂತ ತೆಳ್ಳಗಿರುತ್ತದೆ. ಇದರಿಂದಾಗಿ ಹಲ್ಲಿನ ಕ್ಷಯ ಉಂಟಾಗುವ ಅಪಾಯ ಹೆಚ್ಚು.

ಹಲ್ಲು ಆರು ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲೇ ಕೊಳೆಯಲು ಆರಂಭಿಸುತ್ತದೆ. ಈ ಹಲ್ಲಿನ ಕೊಳೆತವು ಬ್ಯಾಕ್ಟೀರಿಯಾ ಸಂಪರ್ಕದಿಂದ ಉಂಟಾಗುತ್ತೆ ಅದರಲ್ಲೂ ಸಿಹಿಯ ಸೇವನೆ ಈ ಸಂಭವವನ್ನು ದ್ವಿಗುಣಗೊಳಿಸುತ್ತದೆ.

ಹಲ್ಲು ಮೂಡಿದ ನಂತರ ಮಕ್ಕಳಿಗೆ ಎದೆಹಾಲಿನ ಜೊತೆಗೆ ಇತರ ಹಣ್ಣುಗಳ ರಸವನ್ನು, ಹಣ್ಣನ್ನು ನೀಡುತ್ತೇವೆ. ಇದರಲ್ಲಿ ಸಿಹಿಯೂ ಇರುತ್ತದೆ. ಇದರಿಂದಾನೂ ಹಲ್ಲು ಹುಳುಕು ಆರಂಭವಾಗುತ್ತೆ. ಹಾಗಾಗಿ ಮೊದಲ ಹಾಲುಹಲ್ಲು ಮೂಡಿದಾಗಿನಿಂದ ಮಕ್ಕಳ ಹಲ್ಲಿನ ಬಗ್ಗೆ ಹೇಗೆ ಕಾಳಜಿ ವಹಿಸುವುದು ಎನ್ನುವುದನ್ನು ಕೆಳಗೆ ವಿವರಿಸಲಾಗಿದೆ.

ಹುಟ್ಟಿನಿಂದ ಒಂದು ವರ್ಷದವರೆಗೆ

ಮಗುವಿಗೆ ಹಲ್ಲು ಮೂಡಿದಾಗಿನಿಂದ ಅಲ್ಲ, ಹಲ್ಲು ಮೂಡುವ ಮೊದಲೇ ಮಗುವಿನ ಒಸಡುಗಳನ್ನು ಮೃದುವಾದ, ಸ್ವಚ್ಛ, ಒದ್ದೆ ಬಟ್ಟೆಯಿಂದ ದಿನಕ್ಕೆರಡುಬಾರಿ ಒರೆಸಬೇಕು.

ಮೊದಲ ಹಲ್ಲು ಕಾಣಿಸಿಕೊಂಡ ತಕ್ಷಣ ಶಿಶುಗಳಿಗಾಗಿಯೇ ಇರುವ ಮೃದುವಾದ ಬ್ರಿಸ್ಟಲ್‌ ಟೂತ್‌ ಬ್ರಷ್‌ನಿಂದ ದಿನಕ್ಕೆ ಒಮ್ಮೆಯಾದರೂ, ಮಲಗುವ ಸಮಯದಲ್ಲಾದರೂ ಹಲ್ಲನ್ನು ಸ್ವಚ್ಛಗೊಳಿಸಿ. ಸಾಧ್ಯವಾದರೆ ಮಗುವನ್ನು ಸಮತಟ್ಟಾದ ಸ್ಥಳದಲ್ಲಿ ಮಲಗಿಸಿ, ಅವರ ತಲೆಯನ್ನು ನಿಮ್ಮ ತೊಡೆಯ ಮೇಲಿಟ್ಟುಕೊಂಡು ಮೃದುವಾಗಿ ಬ್ರಷ್‌ ಮಾಡಿ.

ಈಗ ಆನ್‌ಲೈನ್‌ ಹಾಗೂ ಮೆಡಿಕಲ್ ಶಾಪ್‌ಗಳಲ್ಲಿಯೂ ಒಂದುವರ್ಷದೊಳಗಿನ ಮಗುವಿನ ಹಲ್ಲುಜ್ಜುವಂತಹ ಸಿಲಿಕಾನ್‌ ಬ್ರಷ್‌ಗಳು ಸಿಗುತ್ತವೆ. ಇದನ್ನು ನಿಮ್ಮ ಬೆರಳಿನಲ್ಲಿ ಹಾಕಿಕೊಂಡು ಮಗುವಿನ ಹಲ್ಲುಜ್ಜಬಹುದು. ಆದರೆ ಪ್ರತಿಬಾರಿಯೂ ಮಗುವಿನ ಬ್ರಷ್‌ ಬಳಸಿದ ನಂತರ ಸ್ಟೆರಿಲೈಜ್‌ ಮಾಡೋದನ್ನು ಮರೆಯಬೇಡಿ.

ಆರು ತಿಂಗಳು ಮೇಲ್ಪಟ್ಟ ಮಗುವಿಗೆ

ನಿಪ್ಪಲ್‌ ಇರುವ ಬಾಟಲ್‌ಗಿಂತ ಸಿಪ್ಪಿ ಕಪ್‌ಗಳನ್ನು ಮಗುವಿಗೆ ಪರಿಚಯಿಸಿ. ಆದರೂ ಹೆಚ್ಚು ಹಣ್ಣಿನ ರಸವನ್ನು ಕೊಡಬೇಡಿ. ದಿನಕ್ಕೆ 125 ಎಂಎಲ್‌ನಷ್ಟು ಮಾತ್ರ ಹಣ್ಣಿನ ರಸ ಕೊಡಿ. ಬಾಟಲ್‌ನಲ್ಲಿ ಹಣ್ಣಿನ ರಸವನ್ನು ಕೊಡಬೇಡಿ.

ನಿದ್ದೆಯ ಸಮಯದಲ್ಲಿ ಬಾಟಲಿಯ ಅಗತ್ಯವಿದ್ದರೆ ಹಾಲು ಅಥವಾ ಜ್ಯೂಸ್‌ಗಿಂತ ನೀರನ್ನು ನೀಡಿ. ಮಲಗುವ ಮುನ್ನ ಹಾಲುಣಿಸಿದಲ್ಲಿ ಮಲಗುವ ಮೊದಲು ಹಲ್ಲುಜ್ಜುವುದನ್ನು ಮರೆಯಬೇಡಿ. ಮಗುವು ಬಳಸುವ ಸೂದರ್‌ ಅಥವಾ ನಿಪ್ಪಲ್‌ ಬಾಟಲ್‌ ನಿಮ್ಮ ಬಾಯಿಯೊಳಗೆ ಎಂದಿಗೂ ಹಾಕಿಕೊಳ್ಳಬೇಡಿ. ನಿಮ್ಮ ಬಾಯಿಯಲ್ಲಿರುವ ಬ್ಯಾಕ್ಟೀರಿಯಾ, ವೈರಸ್‌ಗಳು ಸುಲಭಾವಾಗಿ ಇದರ ಮೂಲಕ ಮಗುವಿನ ಬಾಯಿಗೂ ಹರಡುತ್ತವೆ. ಮಗುವಿಗೆ ಹಲ್ಲು ಬಂದ ನಂತರ ಒಂದು ವರ್ಷದೊಳಗಾಗಿ ವೃತ್ತಿಪರ ದಂತವೈದ್ಯರನ್ನು ಭೇಟಿ ಮಾಡಿ.

ಒಂದರಿಂದ ಎರಡು ವರ್ಷದ ಮಕ್ಕಳ ಹಲ್ಲಿನ ಆರೈಕೆ

* ಮಗುವಿಗೆ ಒಂದು ವರ್ಷ ದಾಟಿದ ನಂತರ ಪ್ರತಿದಿನವೂ ಮಗುವಿನ ಹಲ್ಲುಜ್ಜಿ. ದಂತವೈದ್ಯರ ಸಲಹೆಯ ಮೇರೆಗೆ ಫ್ಲೋರೈಡ್‌ ಟೂತ್‌ಪೇಸ್ಟ್ ಸಣ್ಣ ಪ್ರಮಾಣದಲ್ಲಿ ಅಂದರೆ ಅಕ್ಕಿಕಾಳಿನಷ್ಟು ಗಾತ್ರದಲ್ಲಿ ಬಳಸಿ.

* ತಿಂಗಳಿಗೊಮ್ಮೆ ಬಾಲ್ಯದ ಹಲ್ಲಿನ ಕ್ಷಯದ ಲಕ್ಷಣಗಳನ್ನು ಪರಿಶೀಲಿಸಿ. ಮಗುವಿನ ಮೇಲಿನ ತುಟಿಯನ್ನು ಮೇಲಕ್ಕೆತ್ತಿ ಹಲ್ಲುಗಳ ಮೇಲೆ ಅಥವಾ ವಸಡಿನ ರೇಖೆಯ ಉದ್ದಕ್ಕೂ ಚಾಕ್‌ನಂತಹ ಬಿಳಿ ಅಥವಾ ಕಂದು ಬಣ್ದದ ಕಲೆಗಳಿವೆಯಾ ನೋಡಿ. ಈ ರೀತಿ ಇದ್ದಲ್ಲಿ ಸಾಧ್ಯವಾದಷ್ಟು ಬೇಗ ವೃತ್ತಿಪರ ದಂತವೈದ್ಯರ ಬಳಿ ಮಗುವನ್ನು ಕರೆದುಕೊಂಡು ಹೋಗಿ.

* 12 ತಿಂಗಳಿನಿಂದ 15ತಿಂಗಳ ನಡುವೆ ಬಾಟಲ್‌ನಿಂದ ಕಪ್‌ಗೆ ಶಿಫ್ಟ್‌ ಆಗಿ. ಮಗುವಿಗೆ ಎಲ್ಲಾ ಪಾನೀಯಗಳನ್ನು ಕಪ್‌ನಲ್ಲಿ ನೀಡಿ.

* ನಿದ್ದೆ ಮಾಡುವಾಗ ಮತ್ತು ಮಲಗುವಾಗ ಸೂದರ್‌ನ ಬಳಕೆಯನ್ನು ಕಡಿಮೆ ಮಾಡಿ.

ಮೂರರಿಂದ ನಾಲ್ಕು ವರ್ಷದ ಮಕ್ಕಳಲ್ಲಿ ಹಲ್ಲಿನ ಆರೈಕೆ

* ಮಗುವಿಗೆ ಮೂರು ವರ್ಷ ತುಂಬಿದಾಗ ಇಪ್ಪತ್ತು ಹಲ್ಲುಗಳೂ ಬರುತ್ತವೆ. ಮೂರು ವರ್ಷದ ನಂತರ ಮಕ್ಕಳಿಗೆ ದಿನಕ್ಕೆ ಎರಡು ಬಾರಿ ಎರಡು ನಿಮಿಷಗಳ ಕಾಲ ಹಲ್ಲುಜ್ಜುವುದನ್ನು ಅಭ್ಯಾಸ ಮಾಡಿಸಿ.

* ಹಸಿರು ಬಟಾಣಿ ಗಾತ್ರದಷ್ಟು ಫ್ಲೋರೈಡ್‌ ಟೂತ್‌ಪೇಸ್ಟ್‌ ಬಳಸಲು ಪ್ರಾರಂಭಿಸಿ, ಹಲ್ಲುಜ್ಜುವಾಗ ಟೂತ್‌ಪೇಸ್ಟ್ ನುಂಗುವ ಬದಲು ಉಗುಳಲು ಕಲಿಸಿ.

* ನಿಮ್ಮ ಮಗು ಹಲ್ಲುಜ್ಜುವಾಗ ಅವರನ್ನು ನೋಡಿಕೊಳ್ಳಿ, ಅವರಿಗೆ ಹಲ್ಲುಜ್ಜುವ ವಿಧಾನವನ್ನು ಸ್ವಲ್ಪ ಸ್ವಲ್ಪವೇ ಆಭ್ಯಾಸ ಮಾಡಿಸಿ, ಅವರಾಗಿ ಹಲ್ಲುಜ್ಜಲು ಪ್ರೋತ್ಸಾಹಿಸಿ.

* ಅವರಾಗಿಯೇ ಹಲ್ಲುಜ್ಜಲು ಪ್ರಾರಂಭಿಸಿದ ನಂತರ ಕೊನೆಗೆ ಎಲ್ಲಾ ಹಲ್ಲುಗಳು ಸ್ವಚ್ಛವಾಗಿದೆಯೇ ಎನ್ನುವುದನ್ನು ಗಮನಿಸಿ.

ನಾಲ್ಕು ವರ್ಷ ಮೇಲ್ಪಟ್ಟ ಮಕ್ಕಳಿಗೆ

ನಾಲ್ಕು ವರ್ಷ ಮೇಲ್ಪಟ್ಟ ಮಕ್ಕಳು ಅವರಾಗಿಯೇ ಹಲ್ಲುಜ್ಜಲು ಕಲಿತಾರೆ. ಆದರೊಂದಿಗೆ ಈ ಕೆಳಗಿನ ಅಭ್ಯಾಸಗಳನ್ನು ಮಾಡಿಸಿ.

* ಹಲ್ಲುಜ್ಜುವ ಮೊದಲ ಮತ್ತು ನಂತರ ಕೈಗಳನ್ನು ತೊಳೆಯಿರಿ.

* ಪ್ರತಿಯೊಂದು ಬ್ರಷ್‌ ಇನ್ನೊಂದು ಬ್ರಷ್‌ಗೆ ತಾಗದಂತೆ ಇಡಿ ಮತ್ತು ಅದು ಒಣಗುವಂತೆ ನೋಡಿಕೊಳ್ಳಿ.

* ಬ್ರಷ್‌ನ ಕೂದಲುಗಳು ಹೋಗಿ ಚಪ್ಪಟೆಯಾದಾಗಾ ಅಥವಾ ಸಾಧ್ಯವಾದರೆ ಪ್ರತಿ ತಿಂಗಳಿಗೊಮ್ಮೆ ಹಲ್ಲುಜ್ಜುವ ಬ್ರಷ್‌ ಬದಲಾಯಿಸಿ.

* ಶೀತ ಅಥವಾ ಜ್ವರ ಬಂದ ನಂತರ ಬ್ರಷ್‌ಗಳನ್ನು ಬದಲಾಯಿಸಿ.

* ಮಗುವಿಗೆ ಊಟದ ನಡುವೆ ಸ್ವಲ್ಪ ನೀರನ್ನು ನೀಡಿ. ಕ್ಯಾಂಡಿ, ಚಾಕಲೇಟ್‌, ಡ್ರೈಫ್ರೂಟ್ಸ್‌ ಅದರಲ್ಲೂ ಒಣದ್ರಾಕ್ಷಿ, ಸಕ್ಕರೆ ಬೆರೆಸಿದ ಪಾನೀಯ ಅಥವಾ ಜ್ಯೂಸ್‌ ಆದಷ್ಟು ಕಡಿಮೆ ಮಾಡಿ.

* ನಿಮಯಮಿತವಾಗಿ ಮಗುವಿನ ದಂತ ಪರೀಕ್ಷೆ ಮಾಡುತ್ತಿರುವುದು ಅವರ ದಂತಕ್ಷೇಮದ ವಿಚಾರದಲ್ಲಿ ಒಳ್ಳೆಯದು.

* ಹಾಲುಹಲ್ಲು ಹೋಗಿ ಶಾಶ್ವತ ಹಲ್ಲು ಬಂದ ಮೇಲೆಯೂ ಮಗು ಹೆಬ್ಬೆರಳು ಚೀಪುವುದನ್ನು ಮುಂದುವರಿಸಿದರೆ ವೈದ್ಯರನ್ನು ಕಾಣಿ.

ಪೋಷಕರಾಗಿ ನೀವು ಈ ಸಂಗತಿಗಳನ್ನು ನೆನಪಿಟ್ಟುಕೊಳ್ಳಿ

ಆರು ತಿಂಗಳ ಮಗುವಿಗೆ ಹಲ್ಲುಗಳು ಮೂಡಲಾರಂಭಿಸಿದಾಗ ಅವರ ಒಸಡುಗಳು ಊದಿಕೊಳ್ಳುತ್ತವೆ ಮತ್ತು ಮೃದುವಾಗಿರುತ್ತದೆ. ಆ ಸಮಯದಲ್ಲಿ ಈ ಟಿಪ್ಸ್ ನಿಮಗೆ ಉಪಯೋಗಕ್ಕೆ ಬರಬಹುದು ನೋಡಿ.

* ಮಗುವಿನ ಒಸಡುಗಳನ್ನು ಸ್ವಚ್ಛವಾದ ಬೆರಳಿನಿಂದ ಉಜ್ಜಿ.

* ಮಗುವೊಗೆ ಅಗಿಯಲು ಏನಾದರೂ ನೀಡಿ. ಅಥವಾ ಕರವಸ್ತ್ರವನ್ನು ಫ್ರೀಜರ್‌ನಲ್ಲಿ ಮೂವತ್ತು ನಿಮಿಷ ಇಟ್ಟು ಅದನ್ನು ಮಗುವಿಗೆ ನೀಡಿ. ಅಥವಾ ಟೀತರ್‌ ನೀಡಿ.

* ಮಗುವಿನ ವಸಡಿನ ಮೇಲೆ ಅರಿವಳಿಕೆ ಅಥವಾ ಮರಗಟ್ಟುವಂತಹ ಜೆಲ್‌ಗಳನ್ನು ಹಚ್ಚಬೇಡಿ. ಅದನ್ನು ಮಗುವು ನುಂಗಿದರೆ ಇನ್ನೊಂದು ಸಮಸ್ಯೆಗೆ ಕಾರಣವಾಗಬಹುದು.

* ಮಗುವಿಗೆ ಸಕ್ಕರೆ ಇರುವ ಟೀಥಿಂಗ್ ಬಿಸ್ಕತ್ತುಗಳನ್ನು ನೀಡಬೇಡಿ.

* ಹಲ್ಲು ಬರುವ ಸಮಯದಲ್ಲಿ ಮಕ್ಕಳಿಗೆ ಜ್ವರ ಬರುತ್ತೆ ಎನ್ನುತ್ತಾರೆ, ಈ ರೀತಿ ಮಗುವಿಗೆ ಜ್ವರ ಬಂದರೆ ನಿರ್ಲಕ್ಷ್ಯ ಮಾಡಬೇಡಿ. ಜ್ವರ ಬಂದಾಗ ವೈದ್ಯರಲ್ಲಿ ಹೋಗಿ ತೋರಿಸಿ.

* ಎರಡು ವರ್ಷ ಮೇಲ್ಪಟ್ಟ ಮಕ್ಕಳಿಗೆ ಸ್ವಲ್ಪವೇ ಮೈ ಬಿಸಿ ಇದ್ದಲ್ಲಿ ಮನೆಯಲ್ಲೇ ಚಿಕಿತ್ಸೆ ನೀಡಬಹುದು. ಜ್ವರ ಬಂದಾಗ ಹೆಚ್ಚು ದ್ರವಾಹಾರಗಳನ್ನು ನೀಡಿ.


 

 

 

 

 

 

 

 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries