ಕಾಸರಗೋಡು: ರೈಲು ಹಳಿ ಮೇಲೆ ಕಲ್ಲುಗಳನ್ನಿರಿಸಿ ವಿಧ್ವಂಸಕ ಕೃತ್ಯಕ್ಕೆ ಯತ್ನಿಸಿದ ಘಟನೆ ಮಾಸುವ ಮುನ್ನ ಕಾಸರಗೋಡು ಸನಿಹದ ಎರಿಯಾಲ್ ಮತ್ತು ಚೇರಂಗೈ ಪ್ರದೇಶದಲ್ಲಿ ಎರಡು ರೈಲುಗಳಿಗೆ ಕಲ್ಲು ತೂರಾಡ ನಡೆಸಲಾಗಿದ್ದು, ಇಬ್ಬರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಶುಕ್ರವಾರ ಸಂಜೆ ಮಂಗಳೂರು-ಕಣ್ಣೂರು ಮಧ್ಯೆ ಸಂಚರಿಸುವ ಮೆಮು ಎಕ್ಸ್‍ಪ್ರೆಸ್ ಹಾಗೂ ಅನಂತರ ಆಗಮಿಸಿದ ಮಂಗಳೂರು-ತಿರುವನಂತಪುರ ಮಾವೇಲಿ ಎಕ್ಸ್‍ಪ್ರೆಸ್ ರೈಲಿಗೆ ಕಲ್ಲು ತೂರಾಟ ನಡೆದಿದೆ.
ಘಟನೆ ನಂತರ ಈ ಪ್ರದೇಶದಿಂದ ಕೆಲವು ಬಾಲಕರು ಓಡಿ ಪರಾರಿಯಾಗಿರುವುದಾಗಿ ಪ್ರತ್ಯಕ್ಷದರ್ಶಿಗಳು ಸ್ಥಳೀಯರಲ್ಲಿ ತಿಳಿಸಿದ್ದಾರೆ.
ಕಲ್ಲು ತೂರಾಟ ನಡೆದಿರುವ ಬಗ್ಗೆ ರೈಲು ಪ್ರಯಾಣಿಕರು ರೈಲ್ವೆ ಪೊಲೀಸರಿಗೆ ನೀಡಿದ ಮಾಹಿತಿಯನ್ವಯ ಕಾಸರಗೋಡು ರೈಲ್ವೆ ಠಾಣೆ ಎಸ್.ಐ ಪಿ.ಎಸ್. ಮೋಹನನ್ ನೇತೃತ್ವದಲ್ಲಿ ರೈಲ್ವೆ ಪೊಲೀಸರು ಹಾಗೂ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಜಂಟಿ ತಂಡ ಸ್ಥಳಕ್ಕಾಗಮಿಸಿ ಶೋಧ ಮುಂದುವರಿಸಿದ್ದಾರೆ. ಇತ್ತೀಚೆಗೆ ಉಪ್ಪಳ ಸನಿಹದ ಮುಟ್ಟಂ, ಕಾಸರಗೋಡು ಕೋಟಿಕುಳಂ, ಕಣ್ಣೂರು ಜಿಲ್ಲೆಯ ಪಾಪಿನಶ್ಯೇರಿ ಸೇರಿದಂತೆ ವಿವಿಧೆಡೆ ರೈಲ್ವೆ ಹಳಿಯಲ್ಲಿ ಕಗ್ಗಲ್ಲು ಇರಿಸಿ ಬುಡಮೇಲು ಕೃತ್ಯಕ್ಕೆ ಯತ್ನಿಸಲಾಗಿತ್ತು. ಕಳೆದ ಹಲವು ವರ್ಷಗಳಿಂದ ಅವಳಿ ಜಿಲ್ಲೆಗಳಲ್ಲಿ ನಿಗದಿತ ಪ್ರದೇಶಗಳಲ್ಲಿ ರೈಲುಗಳಿಗೆ ಕಲ್ಲೆಸೆಯುವ ಕೃತ್ಯ ನಡೆದುಬರುತ್ತಿದ್ದರೂ, ಆರೋಪಿಗಳ ಪತ್ತೆ ಸಾಧ್ಯವಾಗದಿರುವುದು ಕಿಡಿಗೇಡಿ ಕೃತ್ಯಕ್ಕೆ ಸಹಕಾರಿಯಾಗುತ್ತಿರುವುದಾಗಿ ಆರೋಪ ಕೇಳಿಬರುತ್ತಿದೆ.
ಕಾಸರಗೋಡಿನಲ್ಲಿ ಎರಡು ರೈಲುಗಳಿಗೆ ಕಲ್ಲು: ಇಬ್ಬರಿಗೆ ಗಾಯ
0
ಜುಲೈ 30, 2022
Tags