ಪೆರ್ಲ: ಹಲವಾರು ಅಪಘಾತಗಳಿಗೆ ಸಾಕ್ಷಿಯಾಗುತ್ತಿರುವ ಅಂತಾರಾಜ್ಯ ಸಂಪರ್ಕ ಕಲ್ಪಿಸುವ ಪೆರ್ಲದಿಂದ ಸ್ವರ್ಗ ಮೂಲಕ ಪುತ್ತೂರು ತೆರಳುವ ರಸ್ತೆಗೆ ಕನ್ನಟಿಕಾನ ಪ್ರದೇಶದಲ್ಲಿ ಕೊನೆಗೂ ರಸ್ತೆಬದಿ ತಡೆಬೇಲಿ ನಿರ್ಮಾಣದ ಕಾಮಗಾರಿ ಆರಂಭಿಸಲಾಗಿದೆ.
ಪಾಣಾಜೆ-ಸೂರಂಬೈಲ್ ಹಾದಿಯಾಗಿ ಪುತ್ತೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇಕ್ಕಟ್ಟಾಗಿದ್ದು, ಚಾಲಕರ ಪಾಲಿಗೆ ನರಕಸದೃಶವಾಗುತ್ತಿರುವ ಬಗ್ಗೆ 'ವಿಜಯವಾಣಿ' ವಿಶೇಷ ವರದಿ ಪ್ರಕಟಿಸುವ ಮೂಲಕ ಸರ್ಕಾರದ ಗಮನ ಸೆಳೆದಿತ್ತು. ಕನ್ನಟಿಕಾನದಲ್ಲಿ ಸುಮಾರು ನೂರು ಮೀ. ವರೆಗೆ ಕಬ್ಬಿಣದ ತಡೆಬೇಲಿ ಅಳವಡಿಸುವ ಕೆಲಸ ಗುರುವಾರ ಆರಂಭಗೊಂಡಿದೆ.
ಪೆರ್ಲದಿಂದ ಕನ್ನಟಿಕಾನ, ಕೋಟೆ, ಸೈಪಂಗಲ್ಲು, ಗಾಳಿಗೋಪುರ ಮೂಲಕ ಹಾದುಹೋಗುವ ರಸ್ತೆ ಅಗಲಕಿರಿದಾಗಿದ್ದು, ನಿರಂತರ ವಾಹನ ಅಪಘಾತಗಳಿಗೆ ಕಾರಣವಾಗುತ್ತಿದೆ. ಚಾಲಕರ ಗಮನ ರಸ್ತೆಯಿಂದ ಅಲ್ಪ ತಪ್ಪಿದರೂ, ಕಡಿದಾದ ಹೊಂಡಕ್ಕುರುಳುವ ಅಪಾಯ ಕಾಡುತ್ತಿದೆ.
ಪೆರ್ಲದಿಂದ ಸ್ವರ್ಗ-ಪಾಣಾಜೆ-ರೆಂಜ ಮೂಲಕ ಪುತ್ತೂರಿಗೆ ಸಂಚರಿಸುವ ಸನಿಹದ ಹಾದಿ ಇದಾಗಿದ್ದು, ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿರುವ ಈ ರಸ್ತೆಯನ್ನು ಜಿಲ್ಲಾ ಪಂಚಾಯಿತಿ ನಿರ್ವಹಿಸುತ್ತಿದೆ. ಜಿಲ್ಲಾ ಪಂಚಾಯಿತಿಯ ಡಿಸ್ಟ್ರಿಕ್ಟ್ ಮೇಜರ್ ರೋಡ್(ಡಿಎಂಆರ್)ವಿಭಾಗ ರಸ್ತೆಯ ನಿರ್ವಹಣೆ ನಡೆಸುತ್ತಿದ್ದು, ಪ್ರಸಕ್ತ ರಸ್ತೆಯಲ್ಲಿ ನಿರಂತರ ನಡೆಯುತ್ತಿರುವ ಅಪಘಾತಗಳಿಂದ ಕುಖ್ಯಾತಿಗೂ ಕಾರಣವಾಗಿದೆ. ಪೆರ್ಲದಿಂದ ಸ್ವರ್ಗ ವರೆಗಿನ ಹಾದಿಯಲ್ಲಿ ಕಳೆದ ಒಂದೆರಡು ದಶಕದಲ್ಲಿ ಹತ್ತಕ್ಕೂ ಹೆಚ್ಚು ದೊಡ್ಡ ಅಪಘಾತಗಳು ನಡೆದಿದ್ದು, ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರಸ್ತೆ ಅಭಿವೃದ್ಧಿಗೊಳಿಸುವಂತೆ ದೀರ್ಘ ಕಾಲದಿಂದ ಸಾರ್ವಜನಿಕರು ಹಾಗೂ ಚಾಲಕರು ಒತ್ತಾಯಿಸುತ್ತಾ ಬಂದಿದ್ದು, ಸ್ಥಳೀಯ ಜನತೆಯ ನಿರಂತರ ಮನವಿಗೆ ಸ್ಪಂದಿಸಿ ಇಲಾಖೆ ತಡೆಬೇಲಿ ನಿರ್ಮಾಣಕ್ಕೆ ಮುಂದಾಗಿದೆ. ಅಂತಾರಜ್ಯ ಸಂಪರ್ಕದ ಈ ರಸ್ತೆಯನ್ನು ಅಗಲಗೊಳಿಸುವುದರ ಜತೆಗೆ ಹೆಚ್ಚಿನ ಅಭಿವೃದ್ಧಿ ನಡೆಸುವಂತೆ ಜನತೆ ಒತ್ತಾಯಿಸಿದ್ದಾರೆ.