ಲಖನೌ: ಅಂಗವಿಕಲರು ಹಾಗೂ ಅತ್ಯಾಚಾರ ಸಂತ್ರಸ್ತರಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ವೇಳೆ ಉತ್ತರ ಪ್ರದೇಶದ ಅಧೀನ ನ್ಯಾಯಾಲಯಗಳ ನ್ಯಾಯಾಧೀಶರು ಹೆಚ್ಚು ಸಂವೇದನಾಶೀಲರಾಗಿರಬೇಕು. ನ್ಯಾಯದಾನ ಪ್ರಕ್ರಿಯೆಯಲ್ಲಿ ಇದು ವ್ಯಕ್ತವಾಗಬೇಕು ಎಂದು ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿಗಳು ಹೇಳಿದ್ದಾರೆ.
' ಲಿಂಗತ್ವ ನ್ಯಾಯ ಹಾಗೂ ಅಂಗವಿಕಲರು/ಲೈಂಗಿಕ ದೌರ್ಜನ್ಯದ ಸಂತ್ರಸ್ತರ ಕುರಿತು ಜಿಲ್ಲಾ ನ್ಯಾಯಾಲಯಗಳ ನ್ಯಾಯಾಧೀಶರನ್ನು ಸಂವೇದನಾಶೀಲರನ್ನಾಗಿ ಮಾಡುವುದು' ಎಂಬ ವಿಷಯ ಕುರಿತ ಎರಡು ದಿನಗಳ ಸಮಾವೇಶದಲ್ಲಿ ಹೈಕೋರ್ಟ್‌ನ ನ್ಯಾಯಮೂರ್ತಿಗಳು ಮಾತನಾಡಿದರು.
ಅಲಹಾಬಾದ್ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮಾತನಾಡಿ, 'ರಾಜ್ಯದಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಸಂಖ್ಯೆಯು ಜನರಿಗೆ ಸಕಾಲದಲ್ಲಿ ನ್ಯಾಯ ಸಿಗುತ್ತಿಲ್ಲ ಎಂಬುದನ್ನು ತೋರಿಸುತ್ತವೆ' ಎಂದರು.
ನ್ಯಾಯಮೂರ್ತಿ ಡಿ.ಕೆ.ಉಪಾಧ್ಯಾಯ, 'ಮಹಿಳೆಯರನ್ನು ಗೌರವಿಸುವುದನ್ನು ನಾವು ಅಳವಡಿಸಿಕೊಳ್ಳಬೇಕು. ಜೊತೆಗೆ, ಸಮಾಜದಲ್ಲಿ ಎಲ್ಲರೂ ಒಂದೇ ಎಂಬ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು' ಎಂದರು.